ಮಧುಗಿರಿ - ಹಿಂದುಳಿದ ಪ್ರದೇಶದಲ್ಲಿ ಹೈನುಗಾರಿಕೆ ರೈತರ ಕೈಹಿಡಿದಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿಮರಿಯಪ್ಪ ರಂಗ ಮಂದಿರದಲ್ಲಿ ತುಮಕೂರು ಹಾಲು ಒಕ್ಕೂಟ, ತುಮಕೂರು ಜಿಲ್ಲಾ ರೈತರ ಮತ್ತು ಎಂಪಿಸಿಎಸ್ ನೌಕರರ ಹಾಗೂ ಸಾಮಾನ್ಯ ಟ್ರಸ್ಟ್ ವತಿಯಿಂದ ಹಾಗೂ ಕೊಂಡವಾಡಿ ಚಂದ್ರಶೇಖರ್ ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸೊರಗಿದರೆ ದೇಶ ಸೊರಗುತ್ತದೆ. ದೇಶಕ್ಕೆ ಅನ್ನ ನೀಡುವ ರೈತ ಎಂದು ಸೊರಗಬಾರದು. ಬರಗಾಲದಿಂದ ತತ್ತರಿಸಿದ್ದ ತಾಲೂಕಿನ ಜನತೆಗೆ ಹೈನುಗಾರಿಕೆ ಕೈ ಹಿಡಿದಿದೆ. ಕೊಂಡವಾಡಿ ಚಂದ್ರಶೇಖರ್ ರವರು ರೈತ ಕಲ್ಯಾಣ ಟ್ರಸ್ಟ್ ಆಫೀಸಿ ಹೈನುಗಾರರಿಗೆ ಅನೇಕ ಸವಲತ್ತುಗಳನ್ನು ಒದಗಿಸಿದ್ದಾರೆ. ಟ್ರಸ್ಟ್ ವತಿಯಿಂದ ನೀಡುವ ಸವಲತ್ತುಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿಸಬೇಕು ಎಂದು ತಿಳಿಸಿದರು.
ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ನಾನು ತುಮುಲ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಂದ ಅನೇಕ ಹೈನುಗಾರರಿಗೆ ಸಹಾಯವಾಗಿದೆ. ರೈತ ಕಲ್ಯಾಣ ಟ್ರಸ್ಟ್ ನಿರ್ಮಿಸಿ ಅನೇಕ ಸವಲತ್ತುಗಳನ್ನು ಒದಗಿಸಿ ಕೊಟ್ಟಿರುವ ತೃಪ್ತಿ ನನಗಿದ್ದು, ಹೈನುಗಾರರ ಸಂಕಷ್ಟಕ್ಕೆ ರೈತ ಕಲ್ಯಾಣ ಟ್ರಸ್ಟ್ ಸದಾ ಬದ್ಧವಾಗಿದೆ. ಇಂದು 1 ಕೋಟಿ ರೂ ಗಳ ಚೆಕ್ ಗಳನ್ನು ಸುಮಾರು 300 ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ಚೆಕ್ ವಿತರಣಾ ಕಾರ್ಯಕ್ರಮದ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುತ್ತಿದ್ದು, ಆರೋಪ ಮಾಡುವವರು ಖುದ್ದಾಗಿ ಫಲಾನುಭವಿಗಳ ಬಳಿ ವಿಚಾರಿಸಬಹುದು ಎಂದ ಅವರು, ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡಬೇಕು, ಇದರಿಂದ ಗಳಿಸುವ ಹಣದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಕೆಂಚಮಾರಯ್ಯ ಮಾತನಾಡಿ, ಸತತ ಬರಗಾಲಕ್ಕೆ ತುತ್ತಾಗಿರುವ ಕ್ಷೇತ್ರದಲ್ಲಿ ರೈತ ವ್ಯವಸಾಯ ನಂಬಿ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಹೈನುಗಾರಿಕೆ ರೈತರ ಕೈಹಿಡಿದಿದ್ದು, ಹೈನುಗಾರರ ಜೀವನ ಮಟ್ಟವನ್ನು ಆರ್ಥಿಕವಾಗಿ ಸಬಲಗೊಳಿಸಲು ಕೊಂಡವಾಡಿ ಚಂದ್ರಶೇಖರ್ ರವರು ರೈತ ಕಲ್ಯಾಣ ಟ್ರಸ್ಟ್ ಸ್ಥಾಪಿಸಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ. ರೈತರು ಉತ್ತಮ ಆರೋಗ್ಯ ಕಾಪಾಡಿಕೊಂಡು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿಸಬೇಕು ಹಾಗೂ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪೋಷಕರ ಋಣ ತೀರಿಸುವುದರ ಜೊತೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಾಲು ಉತ್ಪಾದಕರ ಸಂಘಗಳಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಅವರು ಅನೇಕ ಸಹಕಾರ ನೀಡಿದ್ದಾರೆ. ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರು ತಲಾ 3 ಲಕ್ಷ ಅನುದಾನ ನೀಡಿದ್ದು, ತಾಲೂಕಿನ ಹೈನುಗಾರರು ಅವರಿಗೆ ಚಿರಋಣಿಯಾಗಿರಬೇಕು - ಕೊಂಡವಾಡಿ ಚಂದ್ರಶೇಖರ್, ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ.
ಬಾಕ್ಸ್ -
ಬಿಜೆಪಿ ಸರ್ಕಾರ ನಮ್ಮನ್ನು ಮಲತಾಯಿದರಣೆಯಿಂದ ನೋಡುತ್ತಿದ್ದು, ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಎಸಗಿದೆ. ಆದರೂ ಪ್ರಾಮಾಣಿಕವಾಗಿ ಪ್ರಯತ್ನಪಟ್ಟು ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವ ತೃಪ್ತಿ ನನಗಿದ್ದು, ಮತ್ತೊಮ್ಮೆ ನಿಮ್ಮ ಆಶೀರ್ವಾದ ಬಯಸಿದ್ದೇನೆ - ಎಂ.ವಿ.ವೀರಭದ್ರಯ್ಯ ಶಾಸಕರು.
ಪುರಸಭಾ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚಿಕ್ಕೋಬಳ ರೆಡ್ಡಿ, ಮೂಡ್ಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ದೊಡ್ಡಯ್ಯ, ಸಿದ್ದಪ್ಪ, ಲಕ್ಷ್ಮೀ ನರಸಪ್ಪ, ಆನಂದ್, ಕಂಬಣ್ಣ, ಮುಖಂಡರಾದ ಬಿಜವರ ಶ್ರೀನಿವಾಸ್, ಹನುಮಂತರಾಯಪ್ಪ, ಗುಂಡಗಲ್ಲು ಶಿವಣ್ಣ, ತಿಮ್ಮಣ್ಣ, ಭೀಮರಾಜು, ಕರಿಯಣ್ಣ, ತುಮುಲ್ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಸಾದ್, ರೇಣುಕಾ ಪ್ರಸಾದ್, ಸುಮುಖ್ ಕೊಂಡವಾಡಿ, ವಿಸ್ತರಣಾಧಿಕಾರಿಗಳಾದ ಗಿರೀಶ್, ಶಂಕರ್ ನಾಗ್, ದರ್ಶನ್, ಧರ್ಮವೀರ ಹಾಗೂ ಮುಂತಾದವರು ಇದ್ದರು.
ವರದಿ ಮಧುಗಿರಿ ಬಾಲು ಪಾಣಿಂದ್ರ.