ಚಿಕ್ಕನಾಯಕನಹಳ್ಳಿ: ಮಾ.೧೫ ರಂದು ನಡೆಯಲಿದೆ ಎನ್ನಲಾದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಬಂದು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇಲ್ಲದೇ ಹೋದರೆ ತಾವು ಸೇರಿ ಇಡೀ ಸಮುದಾಯ ಬಿಜೆಯಿಂದ ಹೊರ ಬರಬೇಕಾಗುತ್ತದೆ ಎಂದು ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನ್ಯಾ.ಎ.ಜೆ. ಸದಾಶಿವ ವರದಿ ಜಾರಿಗಾಗಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗ ದಂಡೋರ ರಾಜ್ಯ ಕಾರ್ಯಕಾರಣಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾವು ಹಿಂದಿನಿಂದಲೂ ಬಿಜೆಪಿಯ ಅಂಗ ಸಂಘಟನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಂತರ ಪಕ್ಷದ ಉಪಾಧ್ಯಕ್ಷನಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯ ನಾಯಕರು ವರದಿ ಜಾರಿ ಕುರಿತು ಭರವಸೆ ನೀಡಿದ್ದರೂ ಇನ್ನೂ ಮೀನಮೇಷ ಎಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯ ಮಾದಿಗ ಸಮುದಾಯ ಹಿಂದಿನಿಂದಲೂ ಬಿಜೆಪಿ ಬೆಂಬಲಿಸುತ್ತಾ ಬಂದಿದೆ. ಈ ಸರ್ಕಾರದ ಅವಧಿಯೂ ಮುಗಿಯುತ್ತಾ ಬಂದಿದೆ. ಆದ್ದರಿಂದ ಕೊಟ್ಟ ಮಾತಿನಂತೆ ಅಗತ್ಯ ಕ್ರಮ ಕೈಗೊಳ್ಳದೇ ಇದ್ದರೆ ಪಕ್ಷ ತೊರೆಯಲಿದ್ದೇವೆ. ಪಕ್ಷ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.
ವರದಿ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ತರುವಂತೆ ಸಮುದಾಯ ನನ್ನ ಹಿಂದೆ ಬಿದ್ದಿದೆ. ಪಕ್ಷದ ಪದಾಧಿಕಾರಿಯಾಗಿ ನನಗೂ ಜವಾಬ್ದಾರಿ ಇದೆ. ನನ್ನ ಗೌರವ ಉಳಿಸಿದರೆ ಪಕ್ಷಕ್ಕೆ ಆಭಾರಿಯಾಗಿರುತ್ತೇನೆ. ಇಲ್ಲದಿದ್ದರೆ ಸಮುದಾಯ ತೆಗೆದುಕೊಳ್ಳುವ ನಿಲುವಿಗೆ ಬದ್ಧನಾಗುತ್ತೇನೆ ಎಂದರು.
ನ್ಯಾ. ಸದಾಶಿವ ಆಯೋಗ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವವರೆಗೆ ಸುಮ್ಮನಿದ್ದು, ಈಗ ವರದಿ ಅವೈಜ್ಞಾನಿಕವಾಗಿದೆ. ಜಾರಿ ಮಾಡಕೂಡದು ಎಂದು ಸರ್ಕಾರದ ಮೇಲೆ ಒತ್ತಡ ತರುತ್ತಿರುವ ಸ್ಪೃಶ್ಯ ಸಮುದಾಯಗಳನ್ನು ಎಸ್ಸಿ ಪಟ್ಟಿಯಿಂದಲೇ ಕೈ ಬಿಡುವಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
೩೦ ರಾಜ್ಯಗಳಲ್ಲಿ ಲಂಬಾಣಿ ಸಮುದಾಯ ಒಬಿಸಿ ಪಟ್ಟಿಯಲ್ಲಿದೆ. ಕರ್ನಾಟಕದಲ್ಲಿ ಮಾತ್ರ ಎಸ್ಸಿ ಪಟ್ಟಿಯಲ್ಲಿದೆ. ಆದರೂ ನಾವು ಅವರಿಗೆ ಮೀಸಲು ಕೊಡುವುದನ್ನು ವಿರೋಧಿಸಿಲ್ಲ. ಆದರೆ, ಒಳ ಮೀಸಲಿನಿಂದ ೮೦ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದು ಆ ಸಮುದಾಯದ ಮುಖಂಡರು ಹೇಳಿಕೆ ಕೊಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಎಸ್ಸಿ ಪಟ್ಟಿಯಲ್ಲಿರುವ ಲಂಬಾಣಿ ಸೇರಿ ಸ್ಪೃಶ್ಯ ಸಮುದಾಯಗಳನ್ನು ಕೈ ಬಿಡುವಂತೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಹಾವನೂರು ವರದಿ ಪ್ರಕಾರ ನಮ್ಮ ಜನಸಂಖ್ಯೆಗೆ ಶೇ.೯ ಮೀಸಲು ಬರಬೇಕಿತ್ತು. ಸದಾಶಿವ ವರದಿಯಲ್ಲಿ ಶೇ. ೬ ಕೊಟ್ಟಿದ್ದು, ಇದರಲ್ಲಿ ಶೇ. ೩ ನಷ್ಟವಾಗಿದ್ದರೂ ಹಂಚಿಕೊಂಡು ತಿನ್ನಲೂ ಸಿದ್ದರಿದ್ದೇವೆ ಎಂದರು.
೨೦೨೦ರಲ್ಲಿ ಸ್ಪೃಶ್ಯ ಸಮುದಾಯಕ್ಕೆ ಮೀಸಲು ಮುಂದುವರಿಸಬೇಕೇ ಬೇಡವೆ ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಕೇಳಿದೆ. ಇಲ್ಲಿಯವರೆಗೂ ಸರ್ಕಾರ ವರದಿಕೊಟ್ಟಿಲ್ಲ ಎಂದು ದೂರಿದರು.
ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಬಿ. ಹುಸೇನಪ್ಪ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಮುನಿರಾಜು, ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಳ್ಳಿ ರಾಜಪ್ಪ, ಕಾನೂನು ಘಟಕದ ಅಧ್ಯಕ್ಷ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಇಂದ್ರೇಶ್, ರಾಜ್ಯ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ, ಗೋವಿಂದರಾಜು ಇತರರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು