ಮಧುಗಿರಿ : ಕಾಂಗ್ರೆಸ್‍ನವರು ಈಗ ಗ್ಯಾರೆಂಟಿ ಕಾರ್ಡ ಕೊಡುತ್ತಿದ್ದು ಅವರ ಮಾತಿನ ಮೇಲೆ ಜನರಿಗೆ ನಂಬಿಕೆಯಿಲ್ಲದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪಟ್ಟಣದ ಶ್ರೀ ದಂಡಿನ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಮಧುಗಿರಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿನಿಂದ ಜನರಿಗೆ ಸುಳ್ಳು ಹೇಳುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮಾಯವಾಗಿದ್ದು ಮತ್ತೆ ಪಕ್ಷ ಇದೆಯೆಂದು ಜನರಿಗೆ ಪರಿಚಯ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ಇದು ಪುಕ್ಕಟ್ಟೆ ಕಾರ್ಡಾಗಿದೆ. ಹಿಂದೆ 10 ಕೆ.ಜಿ.ಅಕ್ಕಿ ಕೊಡದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದರೆ ಕೊಡುವುದಾಗಿ ಹೇಳುತ್ತಿದೆ. ಅವರು ಅಧಿಕಾರಕ್ಕೆ ಬರಲ್ಲ ಎಂದರು. ಅವರು ಹೇಳುವಂತೆ 200 ಯುನಿಟ್ ಉಚಿತ ಕರೆಂಟ್ ನೀಡುವ ಯೋಜನೆ ಬೋಗಸ್ ಯೋಜನೆ. ಜನರು 125 ಯುನಿಟ್ ಕೂಡ ಬಳಸಲ್ಲ. ಅಂತದ್ದರಲ್ಲಿ ಕಾಂಗ್ರೆಸ್‍ನವರ ಹೇಳಿಕೆ ಸುಳ್ಳು. ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳುತ್ತದೆ. ಕಾರ್ಯಕರ್ತರ ಉತ್ಸಾಹ ಹಾಗೂ ಡಬಲ್ ಇಂಜಿನ್ ಸರ್ಕಾರ ನೀಡಿದ ಜನಪರ ಯೋಜನೆಗಳು ಇದಕ್ಕೆ ಸಹಕಾರಿಯಾಗಿದೆ. ನಮ್ಮ ಯೋಜನೆಗಳನ್ನು ಜನತೆ ಬೆಂಬಲಿಸಲಿದ್ದು ರಾಜ್ಯಾದ್ಯಂತ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.
ಸಿಎಂ ಮಾತಾಡುವಾಗ ಮಧುಗಿರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಎಲ್.ಸಿ.ನಾಗರಾಜ್ ಹಾಗೂ ಹನುಮಂತೇಗೌಡರ ಅಭಿಮಾನಿಗಳು ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಘೋಷಣೆಗಳನ್ನು ಕೂಗಿದರು. ಆದಕ್ಕೆ ಗರಂ ಆದ ಸಿಎಂ ನೀವು ಈ ರೀತಿ ವರ್ತಿಸುವುದು ನಿಮ್ಮ ನಾಯಕರಿಗೆ ಸಮಸ್ಯೆಯಾಗಲಿದೆ. ಟಿಕೆಟ್ ವಿಚಾರವನ್ನು ಪಕ್ಷ ನಿರ್ಧರಿಸಲಿದ್ದು ಪಕ್ಷದ ವತಿಯಿಂದ ಸರ್ವೆ ಮಾಡಿಸಿ ಯಾರು ಸಮರ್ಥರೋ ಅವರಿಗೆ ಟಿಕೆಟ್ ನೀಡುತ್ತೇವೆ. ಆಗ ನೀವೆಲ್ಲರೂ ಸೇರಿ ಶಕ್ತಿ ತುಂಬಬೇಕು ಎಂದು ನೆರೆದಿದ್ದ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಇದೇ ವೇಳೆ ಕೆಎಎಸ್ ಅಧಿಕಾರಿಯಾಗಿದ್ದ ಜನಮುಖಿ ಸಂಸ್ಥೆ ಅಧ್ಯಕ್ಷ ಸ್ಥಳೀಯರಾದ ಎಲ್.ಸಿ.ನಾಗರಾಜ್ ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಸಚಿವರಾದ ಅಶೋಕ್, ಡಾ.ಸುಧಾಕರ್, ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ್, ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಂಡಲಾಧ್ಯಕ್ಷ ನರಸಿಂಹಮೂರ್ತಿ, ರೈತಮೋರ್ಚ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ, ಜಯಣ್ಣ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಕ್ಷೀತ್, ಮಂಡಲ ಘಟಕದ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಸುರೇಶ್ ಚಂದ್ರ ಮುಖಂಡರು ಹಾಗೂ ಸಹಸ್ರಾರು ಕಾರ್ಯಕರ್ತರು ಜೊತೆಗಿದ್ದರು.
ವರದಿ ಮಧುಗಿರಿ ಬಾಲು ಪಣಿಂದ್ರ.