ಗುಬ್ಬಿ : ಇ.ವಿ.ಎಂ. ಹಾಗೂ ವಿವಿ ಪ್ಯಾಟ್ ಯಂತ್ರ ಬಳಕೆ ಬಗ್ಗೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಬಿ ಆರತಿ ನೇತೃತ್ವದಲ್ಲಿ ಮತದಾನದ ಅಣಕು ಪ್ರದರ್ಶನವನ್ನು ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಲೇಜ್ ಗಳು, ಗ್ರಾಮಗಳಲ್ಲಿ ಯುವ ಮತದಾರರಿಗೆ ಇ.ವಿ.ಎಂ.ಹಾಗೂ ವಿವಿ ಪ್ಯಾಟ್ ಯಂತ್ರ ಬಳಕೆ ಮಾಡುವ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಣಕು ಮತದಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಮತದಾನ ಖಾತರಿಪಡಿಸುವ ಯಂತ್ರವು ಇದಾಗಿದ್ದು, ತಾವು ಯಾರಿಗೆ ಮತದಾನ ಮಾಡಿದ್ದೀರಿ ಎಂಬ ಖಚಿತ ಮಾಹಿತಿ ಪಡೆಯಲು ಏಳು ಸೆಕೆಂಡ್ ನಲ್ಲಿ ಮತಪತ್ರವು ವಿವಿ ಪ್ಯಾಟ್ ನಲ್ಲೇ ಪ್ರದರ್ಶನಗೊಂಡ ಬಳಿಕ ಪೆಟ್ಟಿಗೆಯಲ್ಲಿ ತುಂಡರಿಸಿಕೊಂಡು ಬೀಳುತ್ತದೆ. ಚುನಾವಣೆ ಆಯೋಗದ ನಿರ್ದೇಶನದಂತೆ ಎಲ್ಲಾ ರಾಜಕೀಯ ಪಕ್ಷಗಳು, ಕಾಲೇಜ್ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಗ್ರಾಮೀಣ ಪ್ರದೇಶದ ಯುವಕರಿಗೆ, ಹೊಸ ಮತದಾರರಿಗೆ ಇ.ವಿ.ಎಂ.ಹಾಗೂ ವಿವಿ ಪ್ಯಾಟ್ ಯಂತ್ರ ಬಳಕೆ ಮಾಡುವ ವಿಧಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ಬಿ ಆರತಿ ತಿಳಿಸಿದರು.
ಹಿಂದಿನ ಚುನಾವಣೆಗಳಲ್ಲಿ ಇ.ವಿ.ಎಂ. ಯಂತ್ರ ಬಳಕೆ ಮಾಡಿದ ಬಳಿಕ ಬೀಪ್ ಶಬ್ದ ಬಂದ ಕೂಡಲೇ ಮತದಾನದ ಖಾತರಿಯಾಗುತ್ತಿದ್ದು, ಈ ಬಾರಿ ವಿವಿ ಪ್ಯಾಟ್ ನಲ್ಲಿ ಯಾವ ಅಭ್ಯರ್ಥಿಗೆ ಮತದಾನದ ಮಾಡಲಾಗಿದೆ ಎಂಬುದರ ಬಗ್ಗೆ ಬ್ಯಾಲೆಟ್ ಚೀಟಿ ಏಳು ಸೆಕೆಂಡ್ ನಲ್ಲಿ ಪ್ರದರ್ಶನಗೊಳ್ಳುವ ಮುಖೇನ ಖಾತರಿಯಾಗುತ್ತದೆ. ಹರ್ಬಲ್ ಪೇಬರ್ ಬಳಕೆ ಮಾಡಲಿದ್ದು, 1500 ಚೀಟಿ ಸಂಗ್ರಹವಾಗುವ ಸಾಮರ್ಥ್ಯವನ್ನು ಈ ಯಂತ್ರವು ಹೊಂದಿದೆ. ಜೊತೆಗೆ ಮತದಾರರು ತಾನು ಹಾಕಿದ ಅಭ್ಯರ್ಥಿಗೆ ಬದಲಾಗಿ ಬೇರೊಬ್ಬ ಅಭ್ಯರ್ಥಿಗೆ ಮತದಾನವಾಗಿದೆ ಎಂದು ಮತದಾರರು ಮನಗಂಡಲ್ಲಿ ಸ್ಥಳದಲ್ಲಿಯೇ ಇರುವ ಪ್ರಿಸೇಡಿಂಗ್ ಆಫೀಸರ್ ಗಮನಕ್ಕೆ ತಂದು ಆಯೋಗಕ್ಕೆ ದೂರು ನೀಡಿದಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಟ್ರೈನರ್ ಯತೀಶ್ ಮಾಹಿತಿ ನೀಡಿದರು.
ತಾಲೂಕು ಕಚೇರಿಯ ಪ್ರವೇಶದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಮತದಾನ ಯಂತ್ರದ ಪ್ರಾತ್ಯಕ್ಷಿಕೆಯ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಶ್ರೀರಂಗ, ಚುನಾವಣೆ ತಹಶೀಲ್ದಾರ್ ವೆಂಕಟರಂಗನ್, ಟ್ರೈನರ್ ಯತೀಶ್, ಕಂದಾಯ ನಿರೀಕ್ಷಕರಾದ ರಮೇಶ್, ನಾಗಭೂಷಣ್, ರಾಜಶೇಖರ್, ಉಪಸ್ಥಿತರಿದ್ದರು.
ವರದಿ ಸಂಜಯ್ ಕೊಪ್ಪ.