ಚಿಕ್ಕನಾಯಕನಹಳ್ಳಿ : ಮೂಲ ಸೌಕರ್ಯಗಳನ್ನು ಕಲ್ಪಿಸಿ ಹಳ್ಳಿಗಳನ್ನು ಸದೃಢಗೊಳಿಸಿದರೆ ಮಾತ್ರ ರಾಜ್ಯದ ಪ್ರಗತಿ ಸಾಧ್ಯವಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಶುಕ್ರವಾರ 53 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣರ ಬದುಕು ಸುಗಮಗೊಳಿಸಲು ಬಿಜೆಪಿ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡಿದೆ. ರಸ್ತೆ, ಕುಡಿವ ನೀರು, ಸೂರಿಲ್ಲದವರಿಗೆ ಮನೆಗಳನ್ನು ಕೊಡುವ ಕೆಲಸಗಳಿಗೆ ಆದ್ಯತೆ ನೀಡಿದೆ.
ಈ ಮೂಲಕ ಹಳ್ಳಿ ಜನರ ಗುಳೆ ತಡೆದು ತಾವಿರುವಲ್ಲೇ ನೆಮ್ಮದಿಯಾಗಿ ಬದುಕುವ ವಾತಾವರಣ ಕಲ್ಪಿಸುವ ಕಡೆ ಹೆಜ್ಜೆ ಇಟ್ಟಿದ್ದೇವೆ ಎಂದು ತಿಳಿಸಿದರು.
ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ, ಕೇಂದ್ರ ಸರ್ಕಾರದ ಜತೆ ಸೇರಿ ಪ್ರತಿ ರೈತರ ಖಾತೆಗೆ 10 ಸಾವಿರ ರೂ. ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ 400 ಮಹಿಳೆಯರಿಗೆ ತಲಾ 10 ಸಾವಿರ ರೂ. ಚೆಕ್ ಕೊಡುತ್ತಿದ್ದೇವೆ.
ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಸಣ್ಣಪುಟ್ಟ ಉದ್ಯಮಗಳನ್ನು ತೆರೆದು ಆರ್ಥಿಕ ಪ್ರಗತಿ ಸಾಧಿಸಲು ಅನುಕೂಲವಾಗಲೆಂದು 1ಲಕ್ಷ ರೂ. ಸಹಾಯಧನದೊಂದಿಗೆ 4 ಲಕ್ಷ ರೂ. ಸಾಲ ಕೊಡಿಸುವ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ಎಲ್ಲರಿಗೂ ಉದ್ಯೋಗ ಸಿಗೋದು ಕಷ್ಟವೆಂಬ ಕಾರಣಕ್ಕೆ ಎಂಟತ್ತು ಯುವಕರು ಜತೆಯಾಗಿ ಉದ್ಯಮಗಳನ್ನು ಆರಂಭಿಸಲು 1ಲಕ್ಷ ರೂ. ಸಹಾಯಧನ, 4 ಲಕ್ಷ ರೂ. ಸಾಲ ಸೇರಿ ಒಟ್ಟು 5 ಲಕ್ಷ ರೂ. ಮೂಲ ಬಂಡವಾಳವನ್ನು ಯುವಕ ಸಂಘಗಳಿಗೆ ಕೊಡಿಸುವ ಗುರಿ ಹೊಂದಲಾಗಿದೆ. ಇದೆಲ್ಲವೂ ಹಳ್ಳಿಗಳನ್ನು ಪಟ್ಟಣದ ಸೌಲಭ್ಯಗಳ ಸಮೀಪಕ್ಕೆ ತೆಗೆದುಕೊಂಡು ಹೋಗುವುದೇ ಆಗಿದೆ ಎಂದು ಹೇಳಿದರು.
ತಾಲೂಕಿನ 40-50 ಪಂಚಾಯಿತಿಗಳ ವ್ಯಾಪ್ತಿಯ ಜನರಿಗೆ ಮನೆಗಳನ್ನು ಕೊಡುವ ವ್ಯವಸ್ಥೆ ಮಾಡಲಾಗಿದೆ.
ಪರಿಶಿಷ್ಟ ಜಾತಿ, ಪಂಗಡದವರಿಗೆ 5೦೦-6೦೦ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಶೆಟ್ಟಿಕೆರೆ ಕೆರೆಯ ನೀರನ್ನು ಶುದ್ಧೀಕರಿಸಿ ಗ್ರಾಮಸ್ಥರಿಗೆ ಕುಡಿಯಲು ಕೊಡುವ ಚಿಂತನೆ ಇದೆ. ಯಾರೂ ಯಾರ ಹಂಗಿಲ್ಲದೆ ಜೀವನ ನಡೆಸುವಂತಾದರೆ ಸ್ವತಂತ್ರ ಭಾರತಕ್ಕೆ ಗೌರವ ಬರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ಬಿಜೆಪಿ ಮುಖಂಡ ದಿನೇಶ್ ಶೆಟ್ಟಿಕೆರೆ, ಗ್ರಾಪಂ ಅಧ್ಯಕ್ಷೆ ಕೆಂಪಮ್ಮ, ಉಪಾಧ್ಯಕ್ಷೆ ಯಶೋದಾ, ಗ್ರಾಪಂ ಸದಸ್ಯರಾದ ರಾಜಶೇಖರ್, ಶಶಿಧರ್, ನಿಂಗರಾಜು, ರೂಪಾ, ನಾಗರಾಜು, ಬಿಜೆಪಿ ಸಾಮಾಜಿಕ ಜಾಲತಾಣ ನಿರ್ವಾಹಕ ವಿನಯ್ ಶೆಟ್ಟಿಕೆರೆ ಇತರರು ಇದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.