ಚಿಕ್ಕನಾಯಕನಹಳ್ಳಿ : ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದ್ದು ಅದರಲ್ಲಿ ಪ್ರಥಮ ಬಾರಿಗೆ ಉಚಿತ ಪ್ರಯಾಣ ಜಾರಿಗೊಳಿಸಿದ್ದು ಈ ಯೋಜನೆಯಿಂದ ಮಹಿಳೆಯರಿಗೆ ಪ್ರತಿಯೊಂದು ರೀತಿಯಲ್ಲಿ ನೆರವಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಹೇಳಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ನಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಚಿ.ನಾ.ಹಳ್ಳಿ ಮಾರ್ಗ ಬೆಂಗಳೂರು ಮಾರ್ಗ ಪ್ರಯಾಣ ಬೆಳೆಸಿದ್ದ ಮಹಿಳೆಯರಿಗೆ ಸಿಹಿ ವಿತರಿಸಿ ಯೋಜನೆ ಬಗ್ಗೆ ಮಾತನಾಡಿದರು.
ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿದೆ ಈ ಯೋಜನೆಯಿಂದ ಮಹಿಳೆಯರ ಅಭಿವೃದ್ದಿಗೆ ದಿಕ್ಸೂಚಿಯಾಗಲಿದೆ, ರಾಜ್ಯಾದ್ಯಂತ 42 ಲಕ್ಷ ಮಂದಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದು ಅವರೆಲ್ಲರಿಗೂ ಈ ಯೋಜನೆ ನೆರವಾಗಲಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಈಗಾಗಲೇ ಮೊದಲನೇ ಗ್ಯಾರಂಟಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೊಳಿಸಿದೆ, ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಿದ್ದು ಈ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಆತ್ಮವಿಶ್ವಾಸ ದೊರೆಯಲಿದೆ, ಈ ಯೋಜನೆಗಳು ಮುಂದಿನ ಎಲ್ಲಾ ವರ್ಷಗಳು ಮುಂದುವರೆಯಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಮಹಿಳೆಯರು ವಿರೋಧ ಪಕ್ಷಗಳು ಮಾಡುವ ಯಾವುದೇ ಟೀಕೆಗಳಿಗೆ ಕಿವಿಗೊಡಬೇಡಿ, ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ರಾಜ್ಯಾದ್ಯಂತವಿದೆ ಅಲ್ಲದೆ ಹೊರ ರಾಜ್ಯದಲ್ಲಿ 20 ಕಿ ಮೀ ವರೆಗೆ ಪ್ರಯಾಣ ಬೆಳೆಸಲು ಅವಕಾಶವಿದೆ, ಮಹಿಳೆಯರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯನ್ನು ಪ್ರಯಾಣ ಬೆಳೆಸುವ ತರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಕ್ಕಣ್ಣ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಮುಖಂಡರುಗಳಾದ ಜಗದೀಶ್, ಬ್ರಹ್ಮಾನಂದ್, ನರಸಿಂಹರಾಜು, ಶಿವಾಜಿ, ಸಣ್ಣತಮ್ಮಯ್ಯ, ನರಸಿಂಹಮೂರ್ತಿ, ನೂರ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.