ಚಿಕ್ಕನಾಯಕನಹಳ್ಳಿ : ಎಪಿಎಂಸಿ ಯಾರ್ಡ್ ನ ನಫೆಡ್ ಕೊಬ್ಬರಿ ಖರೀದಿ ಕೇಂದ್ರಕ್ಕೆ ಶಾಸಕ ಸಿ.ಬಿ. ಸುರೇಶ್ ಬಾಬು ಭೇಟಿ ನೀಡಿ ಖರೀದಿ ಕೇಂದ್ರದಲ್ಲಿ ರೈತರಿಗಾಗುತ್ತಿರುವ ಅನ್ಯಾಯದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದರು.
ಸರ್ಕಾರದ ಬೆಂಬಲ ಬೆಲೆಯಲ್ಲಿ ಕೊಬ್ಬರಿಯನ್ನು ರೈತರಿಂದ ಇಲ್ಲಿನ ಎಪಿಎಂಸಿ ಯಾರ್ಡ್ನ ನಫೆಡ್ ನ ಮೂಲಕ ಖರೀದಿಸಲಾಗುತ್ತಿದೆ.
ಆದರೆ ಸದರಿ ಕೇಂದ್ರದಲ್ಲಿ ರೈತರು ತರುವ ಕೊಬ್ಬರಿಯನ್ನು ಪರೀಕ್ಷಿಸುವ ನೆಪದಲ್ಲಿ ಚೂರು ಹಾಗೂ ಸುಕ್ಕುಗಟ್ಟಿದ ಕೊಬ್ಬರಿಯ ಜೊತೆಗೆ ಮಧ್ಯಮ ಗಾತ್ರದ ಕೊಬ್ಬರಿಯನ್ನು ಬೇರ್ಪಡಿಸುತ್ತಿರುವುದರ ಬಗ್ಗೆ ರೈತರಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಖರೀದಿ ಕೇಂದ್ರಕ್ಕೆ ಶಾಸಕ ಸಿ. ಬಿ. ಸುರೇಶ್ ಬಾಬು , ತಹಸೀಲ್ದಾರ್ ಅರ್ಚನಭಟ್ ರೊಂದಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಶೋಷಣೆಯ ಬಗ್ಗೆ ರೈತರು ದೂರಿ, ಕೊಬ್ಬರಿ ಚೂರು ಹಾಗೂ ಸುಕ್ಕುಗಟ್ಟಿದ ಕೊಬ್ಬರಿ ಉಂಡೆಯನ್ನು ಮಾತ್ರ ಬೇರ್ಪಡಿಸದೆ, ಉತ್ತಮ ಗುಣಮಟ್ಟದ ಮಧ್ಯಮ ಗಾತ್ರದ ಕೊಬ್ಬರಿಯನ್ನು ಸಹ ಆರಿಸಿ ಬೇರ್ಪಡಿಸಲಾಗುತ್ತಿದೆ.
ಇದರಿಂದ ಕ್ವಿಂಟಾಲ್ ಗೆ ಸುಮಾರು ಶೇ.40 ರಷ್ಟು ಕೊಬ್ಬರಿಯನ್ನು ತಿರಸ್ಕರಿಸಲಾಗುತ್ತಿದೆ. ಜೊತೆಗೆ ಹಮಾಲಿ ಹಾಗೂ ಚೀಲದ್ದು ಎಂದು ಕೊಬ್ಬರಿ ತೆಗೆಯುವುದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ತಮ್ಮ ಅವಲತ್ತು ತೋಡಿಕೊಂಡರು.
ಶಾಸಕ ಸುರೇಶ್ ಬಾಬು ಅಲ್ಲಿದ್ದ ನಫೆಡ್ ಅಧಿಕಾರಿಯ ಮುಂದೆ ಒಂದು ಮೂಟೆ ಕೊಬ್ಬರಿಯನ್ನು ಪರೀಕ್ಷಿಸಲು ಆದೇಶಿಸಿದರು. ಅದರಲ್ಲಿ ತಿರಸ್ಕರಿಸಿದ ಕೊಬ್ಬರಿಯಲ್ಲಿ ಉತ್ತಮವಾಗಿದ್ದ ಕೊಬ್ಬರಿಗಳನ್ನು ಹೆಕ್ಕಿ ತೆಗೆದು ಇಂತಹ ಕೊಬ್ಬರಿಯನ್ನು ಬೇರ್ಪಡಿಸದಂತೆ ಸೂಚಿಸಿದರು. ಕೇವಲ ಸುಕ್ಕಿನಿಂದ ಕೂಡಿದ ಹಾಗೂ ಚೂರು ಕೊಬ್ಬರಿಗಳನ್ನು ಮಾತ್ರ ಬೇರ್ಪಡಿಸಿ ಎಂದು ಆದೇಶಿಸಿದರು.
ಈ ಭಾಗದ ಭೌಗೋಳಿಕ ಹಿನ್ನೆಲೆಯಲ್ಲಿ ಕೊಬ್ಬರಿಯಲ್ಲಿ ಎಣ್ಣೆ ಹಾಗೂ ರುಚಿಯ ಅಂಶವಿರುವುದರಿಂದ ಸಹಕಾರ ಮನೋಭಾವದಲ್ಲಿ ರೈತರಿಂದ ಖರೀದಿಸಿ ಎಂದು ಅಧಿಕಾರಿಗಳಿಗೆ. ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೊನ್ನೆಬಾಗಿ ಶಶಿಧರ್ ಮುಂತಾದವರಿದ್ದರು. ಖರೀದಿ ಕೇಂದ್ರದ ಮುಂದೆ ಸುಮಾರು 50ಕ್ಕೂ ಹೆಚ್ಚಿನ ವಾಹನದಲ್ಲಿ ಕೊಬ್ಬರಿಯನ್ನು ತರಲಾಗಿತ್ತು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.