ಗುಬ್ಬಿ: ಅಧಿಕಾರಿಗಳು ಪ್ರಾಮಾಣಿಕರಾಗಿದ್ದಲ್ಲಿ ಸಾಮಾಜಿಕ ಹಾಗೂ ಆರ್‌ಟಿಐ ಕಾರ್ಯಕರ್ತರಿಗೂ ಹೆದರುವ ಅಗತ್ಯವಿಲ್ಲ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿ ಅಧಿಕಾರಿಗಳ ಚಳಿ ಬಿಡಿಸಿದರು.
ಈಗಾಗಲೇ ಶಾಲೆಗಳು ಪ್ರಾರಂಭಗೊಂಡಿರುವುದರಿಂದ ಅನೇಕ ಕಡೆ ಹಾನಿಗೆ ಒಳಗಾಗಿರುವ ಸರ್ಕಾರಿ ಶಾಲಾ ಕೊಠಡಿ ಹಾಗೂ ಕಟ್ಟಡಗಳನ್ನು ದುರಸ್ತಿ ಮಾಡುವ ಕಡೆ ಗಮನ ಹರಿಸಬೇಕಿದೆ. ಹಲವೆಡೆ ಶಿಕ್ಷಕರ ಕೊರತೆ ಇದೆ ಎಂದು ತಿಳಿದುಬಂದಿರುವುದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ನಿರ್ಮಾಣದ ಕಡೆ ಗಮನಹರಿಸುವಂತೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಲೋಪ ಎಸುಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದುಮಾಧವ್ ಗೆ ಸೂಚಿಸಿದರು. ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗಳು ರಸ್ತೆ ಕಾಮಗಾರಿ ಮಾಡುವಾಗ ಗುಣಮಟ್ಟ ಪರೀಕ್ಷೆ ಮಾಡಬೇಕು. ಕಾಮಗಾರಿ ನಡೆದ ಸ್ವಲ್ಪ ದಿನಕ್ಕೆ ರಸ್ತೆಗಳು ಹಾಳಾದರೆ ಅದಕ್ಕೆ ಶಾಸಕರನ್ನೇ ದೋಷಿಸುವುದರಿಂದ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಇಂಜಿನಿಯರ್ ಗಳಿಗೆ ತಿಳಿಸಿದರು.
ಅರಣ್ಯ ಇಲಾಖೆಯ ದಾಖಲೆಗಳನ್ನು ಸರಿಪಡಿಸಿಕೊಳ್ಳದ ಕಾರಣ ಸರ್ಕಾರಿ ಜಮೀನು ಎಂದು ತಿಳಿದು ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದ ಅವರು ಅರಣ್ಯ ಇಲಾಖೆಯವರು ಕೇವಲ ಲೆಕ್ಕಕ್ಕೆ ಮಾತ್ರ ಸಸಿಗಳನ್ನು ನಡೆದೆ,ಅವುಗಳನ್ನು ಪೋಷಿಸುವತ್ತಲೂ ಗಮನಹರಿಸಬೇಕು. ತಾಲ್ಲೂಕಿನಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಅಬಕಾರಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿ ಅಕ್ರಮ ಮಾರಾಟಗಾರರ ಮೇಲೆ ಕೇಸು ದಾಖಲಿಸುವಂತೆ ತಿಳಿಸಿದರು.
ತಾಲೂಕಿನ ಹಲವೆಡೆ ಕುಡಿಯುವ ನೀರು ಸರಬರಾಜು ಮಾಡುವ ಹಳೆಯ ಪೈಪ್ ಲೈನ್ ಗೆ ಜೆಜೆಎಂ ಪೈಪ್ ಲೈನ್ ನನ್ನು ಜೋಡಿಸಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಕೆಟ್ಟು ಹೋಗಿರುವ ಹಾರುವ ಪ್ಲಾಂಟ್ ಗಳ ದುರಸ್ತಿಗೆ ಕ್ರಮ ವಹಿಸಲು ಸೂಚಿಸಿದರು. ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಅಗತ್ಯವಿರುವ ತುರ್ತು ಕ್ರಮ ಕೈಗೊಳ್ಳುವಂತೆ ಬೆಸ್ಕಾಂ, ಹೇಮಾವತಿ ನಾಲಾ ವಿಭಾಗ ,ಸಣ್ಣ ನೀರಾವರಿ ಇಲಾಖೆ, ಪಶುಪಾಲನಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು ಅನೇಕ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು,ತಪ್ಪುಗಳನ್ನು ತಿದ್ದಿಕೊಂಡು ಕರ್ತವ್ಯ ನಿರ್ವಹಿಸದಿದ್ದರೆ ಪರಿಣಾಮ ಎದುರಿಸಬೇಕಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ ಆರತಿ, ತಾಲ್ಲೂಕು ಪಂಚಾಯಿತಿ ಇ ಓ ಪರಮೇಶ್ ಕುಮಾರ್, ಸಿ ಪಿ ಐ ಗೋಪಿನಾಥ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.