ಚಿಕ್ಕನಾಯಕನಹಳ್ಳಿ : ತೀರ್ಥಪುರ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಜಾಣೆಹಾರ್ ಉಳಿಸಿ.
ತಾಲ್ಲೂಕಿನ ತೀರ್ಥಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಜಾಣೇಹಾರ್ ಒಂದು ಗ್ರಾಮವನ್ನು ಕ್ಷೇತ್ರದ ಸಂಖ್ಯೆ 9 ಕಂದಿಕೆರೆ ತಾಲ್ಲೂಕು ಪಂಚಾಯಿತಿಗೆ ಸೇರಿಸಿರುವುದನ್ನು ಬದಲಾಯಿಸಿ ಯತಾಸ್ಥಿತಿ ತೀರ್ಥಪುರ ತಾಲ್ಲೂಕು ಪಂಚಾಯಿತಿಗೆ ಉಳಿಸಿಕೊಡುವಂತೆ ಆಗ್ರಹಿಸಿ ಜಾಣೇಹಾರ್ ಗ್ರಾಮಸ್ಥರು, ಮುಖಂಡರು ತಹಶೀಲ್ದಾರ್ ಬಿ. ತೇಜಸ್ವಿನಿ ರವರಿಗೆ ಮನವಿ ಸಲ್ಲಿಸಿದರು.
ಕಂದಿಕೆರೆ ತಾಲ್ಲೂಕು ಪಂಚಾಯಿತಿಯ ಕ್ಷೇತ್ರಕ್ಕೆ ಜಾಣೇಹಾರ್ ಗ್ರಾಮವನ್ನು ಸೀಮಾ ನಿರ್ಣಯದಂತೆ ಸೇರಿಸಿದ್ದು ಕಂದಿಕೆರೆಯು ಹೋಬಳಿ ಕೇಂದ್ರವಾಗಿದ್ದು ಜಾಣೇಹಾರ್ ಗ್ರಾಮಕ್ಕೆ 23 ಕಿ.ಮಿ ದೂರವಿರುತ್ತದೆ. ಮತ್ತು ರಾಮನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿಯನ್ನು ದಾಟಿ ಕಂದಿಕೆರೆಗೆ ಹೋಗಬೇಕಾಗಿರುತ್ತದೆ, ಆದ್ದರಿಂದ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಓಡಾಡಲು ಬಹಳ ಅನಾನುಕೂಲವಾಗಿದ್ದು ಈ ಪ್ರದೇಶ ವೂ ಗುಡ್ಡಗಾಡು ಪ್ರದೇಶವಾಗಿರುತ್ತದೆ. ಕಂದಿಕೆರೆಗೆ ಓಡಾಡಲು ಸರಿಯಾದ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ಭೌಗೋಳಿಕವಾಗಿ ಜಾಣೇಹಾರ್ ಗ್ರಾಮವು ತೀರ್ಥಪುರ ತಾಲ್ಲೂಕು ಪಂಚಾಯಿತಿಗೆ ಹೊಂದಿಕೊಂಡಿರುವುದರಿಂದ ಗ್ರಾಮದ ಅಕ್ಕಪಕ್ಕದ ಗ್ರಾಮಗಳು ತೀರ್ಥಪುರ ತಾಲ್ಲೂಕು ಪಂಚಾಯಿತಿಗೆ ಸೇರಿರುವುದರಿಂದ, ಜಾಣೇಹಾರ್ ಗ್ರಾಮವನ್ನು ತೀರ್ಥಪುರ ತಾಲ್ಲೂಕು ಪಂಚಾಯಿತಿಗೆ ಸೇರಿಸಿ ಈ ಹಿಂದೆ ಇದ್ದಂತೆ ಯತಾಸ್ಥಿತಿಯಂತೆ ತೀರ್ಥಪುರ ತಾಲ್ಲೂಕು ಪಂಚಾಯಿತಿಗೆ ಜಾಣೇಹಾರ್ ಗ್ರಾಮವನ್ನು ಉಳಿಸಿಕೊಡುವ ಮೂಲಕ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್, ಜಾಣೆಹಾರ್ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.
