ಗುಬ್ಬಿ ಸುದ್ದಿ : ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಗುಬ್ಬಿ ಬಿಜೆಪಿ ಮುಖಂಡರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿ ಮೇಲೆ ಹಾರಿಸಿದ್ದ ರಾಷ್ಟ್ರ ಧ್ವಜ ಸೂರ್ಯಾಸ್ತ ಸಮಯದಲ್ಲಿ ಕೆಳಗಿಳಿಸದೆ ರಾತ್ರಿ 8 ಗಂಟೆ ನಂತರ ಸಾರ್ವಜನಿಕ ಚರ್ಚೆ ನಂತರ ತರಾತುರಿ ಅಲ್ಲಿನ ಡಿ ಗ್ರೂಪ್ ನೌಕರರೊಬ್ಬರ ಮೂಲಕ ಕೆಳಗಿಳಿಸಿ ಅಪಮಾನ ಮಾಡಿದ್ದಾರೆ. ಈ ಕೃತ್ಯಕ್ಕೆ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ನೇರ ಹೊಣೆಯಾಗುತ್ತಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಗುಬ್ಬಿ ಬಿಜೆಪಿ ಮುಖಂಡರುಗಳು ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರಿಂದ ದೂರು ಬಂದು ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿದೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೂ ದೂರು ಸಲ್ಲಿಸಿದ್ದೇವೆ. ಆದರೆ ತಹಶೀಲ್ದಾರ್ ಕೂಡಾ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ಮುಖಂಡರುಗಳು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕಾನೂನು ಕ್ರಮಕ್ಕೆ ಮೀನಾಮೇಷ ಎಣಿಸಿದ್ದಲ್ಲಿ ಉಗ್ರ ಪ್ರತಿಭಟನೆಗೂ ಬಿಜೆಪಿ ಸಿದ್ಧವಿದೆ. ಯಾರೇ ಆಗಿದ್ದರೂ ದೇಶ ದ್ರೋಹ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಮಾತನಾಡಿ ತಾಲ್ಲೂಕಿನ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಿರುವ ಎರಡನೇ ಘಟನೆ ಇದಾಗಿದೆ. ಧ್ವಜಕ್ಕೆ ತೋರಿರುವ ಅಗೌರವ ದೇಶ ದ್ರೋಹ ಕೆಲಸ. ಹೊಣೆ ಹೊರಬೇಕಾದ ಅಧಿಕಾರಿಗಳ ರಕ್ಷಣೆ ಕೆಲಸ ಸರಿಯಲ್ಲ. ಇದು ಕ್ರಿಮಿನಲ್ ಪ್ರಕರಣ ಆಗಿದೆ. ನಿರ್ಲಕ್ಷ್ಯ ತೋರಿದರೆ ಮತ್ತೊಂದು ಘಟನೆ ನಡೆಯುತ್ತದೆ. ಕೂಡಲೇ ಕ್ರಮ ಜರುಗಿಸಿ ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಸದಸ್ಯರಾದ ಶಶಿಕುಮಾರ್, ಜಿ ಆರ್ ಶಿವಕುಮಾರ್, ಜಿ.ಆರ್.ಪ್ರಕಾಶ್, ಬಸವರಾಜು, ಮುಖಂಡರಾದ ಬಿಜೆಪಿ ಅಧ್ಯಕ್ಷ ಷಡಾಕ್ಷರಿ, ಕೆ.ಬಿ.ಕೃಷ್ಣಪ್ಪ, ಬಿ.ಲೋಕೇಶ್, ಕೃಷ್ಣಮೂರ್ತಿ, ಜಿ.ಸಿ.ಪ್ರಮೋದ್, ಮಹದೇವಯ್ಯ ಹಾಗೂ ಇನ್ನಿತರರು ಭಾಗವಹಿಸಿದ್ದರು.
ವರದಿ : ಮಡೇನಹಳ್ಳಿ ಮಂಜು.
