ಮಧುಗಿರಿ : ರಕ್ಷಣೆಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರುವ ಬಿಇಎಲ್ ಸಮಸ್ಥೆಯ ಕಾರ್ಯ ಶ್ಲಾಘನೀಯವೆಂದು ಶಾಸಕ ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಬಿಇಎಲ್ ಸಂಸ್ಥೆಯಿಂದ ನೀಡಲಾದ 88 ಲಕ್ಷ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ದೇಶದ ರಕ್ಷಣಾ ಇಲಾಖೆಯಲ್ಲಿನ ಹಲವಾರು ಪರಿಕರಗಳನ್ನು ಉತ್ಪಾದಿಸುವ ಸಂಸ್ಥೆಯಿಂದ ಶಿಕ್ಷಣಕ್ಕೂ ನೆರವನ್ನು ನೀಡುವ ಸಿಎಸ್ಆರ್ ಯೋಜನೆಯಡಿ ಶಾಲಾ ಕಟ್ಟಡವನ್ನು ನಿರ್ಮಿಸಲು ಮುಂದಾಗಿರುವುದು ಸಂತಸ ತಂದಿದ್ದು ಇದಕ್ಕಾಗಿ ಕ್ಷೇತ್ರದ ಪರವಾಗಿ ಸಂಸ್ಥೆಗೆ ಅಭಿನಂದನೆಗಳು. ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನ ಕೊಡಿಸಬೇಕು ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೆ ದೇಶದ ಆಸ್ತಿಯನ್ನಾಗಿಸಬೇಕು ಮಕ್ಕಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ದೇಶಕ್ಕೆ ಕೀರ್ತಿ ತರಬೇಕು ಎಂದರು. ಈ ಗ್ರಾಮಕ್ಕೆ 4 ಕೋಟಿಯಷ್ಟು ಅನುದಾನ ನೀಡಿದ್ದು ಅದನ್ನು ಮುಂದುವರೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಆರ್ .ಪಿ. ಮೋಹನ್ ಮಾತನಾಡಿ 1954ರಲ್ಲಿ ಸ್ಥಾಪನೆಗೊಂಡ ಸಂಸ್ಥೆಯು ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ವಾರ್ಷಿಕ 15,000 ಕೋಟಿ ವಹಿವಾಟು ನಡೆಸುವ ಸಂಸ್ಥೆ ದೇಶದ ಒಂಬತ್ತು ಕಡೆ ಕೆಲಸ ಮಾಡುತ್ತಿದೆ. ಕರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ನಾಲ್ಕು ತಿಂಗಳಲ್ಲಿ 30 ಸಾವಿರ ವೆಂಟಿಲೇಟರ್ ಉತ್ಪಾದಿಸಿ ದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು ನಮಗಿದು ಹೆಮ್ಮೆಯ ಸಂಗತಿ. ನಮ್ಮ ಸಂಸ್ಥೆಯಲ್ಲಿ 350ಕ್ಕೂ ಹೆಚ್ಚು ವಿವಿಧ ರಕ್ಷಣಾತ್ಮಕ ಸಾಮಗ್ರಿಗಳನ್ನು ಉತ್ಪಾದಿಸಲಾಗುತ್ತಿದ್ದು ದೇಶದ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಕಾರ್ಯದ ಜೊತೆ ಸಾಮಾಜಿಕ ಕಳಕಳಿಯನ್ನು ಹೊಂದುವ ಉದ್ದೇಶದಿಂದ ಸಿಎಸ್ಆರ್ ಅನುದಾನವನ್ನು ಬಳಸಿಕೊಂಡು ನಿಮ್ಮೂರಿನ ಶಾಲೆಗೆ ಈ ಅನುದಾನವನ್ನು ನೀಡಲಾಗಿದೆ. ಸಂಸ್ಥೆಯ ಸಮಿತಿಯ ಆದೇಶದಂತೆ ಸುಸಜ್ಜಿತ ಶಾಲಾ ಕೊಠಡಿಗಳನ್ನು ದಾಸೋಹದ ಕೊಠಡಿಯನ್ನು ನಿರ್ಮಿಸಿಕೊಡಲಾಗುವುದು ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ದೂರವಿರಿಸಬಾರದು. ಅವರನ್ನು ಸುಶಿಕ್ಷಿತರನ್ನಾಗಿ ಮಾಡುವ ಮೂಲಕ ದೇಶದ ಸೇವೆಗೆ ಕಳಿಸಿಕೊಡಬೇಕು ಎಂದರು.
ಡಿಡಿಪಿಐ ಕೆ ಜಿ ರಂಗಯ್ಯ ಮಾತನಾಡಿ ಕೆರೆ ಕಟ್ಟಿದರೆ ಎಷ್ಟು ಅನುಕೂಲವೋ ಒಂದು ಶಾಲೆ ಕಟ್ಟುವುದು ಅದಕ್ಕಿಂತ ಮುಖ್ಯ. ಶಿಕ್ಷಣವು ಬದುಕಿಗೆ ಶಕ್ತಿಯಾಗಿದ್ದು ಅದನ್ನು ಬಳಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು, ಈ ಕಾರ್ಯಕ್ಕೆ ಸಹಕರಿಸಿದ ಬಿಇಎಲ್ ಸಂಸ್ಥೆಗೆ ಇಲಾಖೆಯು ಸದಾ ಅಭಾರಿ ಆಗಿರುತ್ತದೆ. ಇದಕ್ಕಾಗಿ ಶ್ರಮಿಸಿದ ಹಿಂದೆ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಕಾಂತಮ್ಮನವರ ಪರಿಶ್ರಮ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಬಿಇಎಲ್ ಕಂಪನಿಯ ಡಿಜಿಎಂ ಶಶಿಭೂಷಣ್, ಇಂಜಿನಿಯರ್ ರವಿಕಾಂತ ನಾಯಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಲೋಕೇಶ್ , ಪಿಡಿಒ ಶಿಲ್ಪ, ಸದಸ್ಯರಾದ ಗೌರಮ್ಮ, ಚೌಡಪ್ಪ, ಗಣೇಶ್, ನರಸಿಂಹಮೂರ್ತಿ, ಮುಖಂಡರಾದ ಬಿಜವರ ಶ್ರೀನಿವಾಸ್, ಜಯಲಕ್ಷ್ಮಿ ವೇಣುಗೋಪಾಲ್, ಇಸಿಓ ಕಾಂತಮ್ಮ, ಹಳೆ ವಿದ್ಯಾರ್ಥಿಗಳ ಸಂಘದ ಮುಖಂಡರಾದ ರವೀಶ್ ಆರಾಧ್ಯ, ನಾಗೇಶ್ ಹಾಗೂ ಮಕ್ಕಳು ಗ್ರಾಮಸ್ಥರು ಹಾಜರಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
