ಗುಬ್ಬಿ: ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ನಮ್ಮದೆ,ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಜೆಡಿಎಸ್ ಪ್ರತಿಸ್ಪರ್ಧಿ ಎನಿಸಿದೆ. ಕಾಂಗ್ರೆಸ್ ಎಂದಿನಂತೆ ಮೂರನೇ ಸ್ಥಾನ ಕಾದಿರಿಸಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕೆಲ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಾರ್ಯಕರ್ತ ಆಧಾರಿತ ಬಿಜೆಪಿ ಪಕ್ಷ ತಳ ಮಟ್ಟದಿಂದ ಸದೃಢವಾಗಿದೆ. ಈ ಹಿನ್ನಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು. ಈ ಪೈಕಿ ಪಕ್ಷ ಪಡೆದ ಗೌಪ್ಯ ವರದಿ, ಸಮೀಕ್ಷೆ, ಸರ್ವೇ ಗ್ರೌಂಡ್ ರಿಪೋರ್ಟ್ ಆಧಾರವಾಗಿ ದಿಲೀಪ್ ಕುಮಾರ್ ಗೆಲುವು ನಿಶ್ಚಿತ ಎಂಬ ನಿಟ್ಟಿನಲ್ಲಿ ಟಿಕೆಟ್ ನೀಡಿದೆ. ಈ ವಿಷಯದಲ್ಲಿ ಬೇಸರ ಆಗುವುದು ಸಹಜ. ಅಸಮಾಧಾನ ಆಗಿರುವವರನ್ನು ಖುದ್ದು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ. ಆದರೂ ಬೆಟ್ಟಸ್ವಾಮಿ ಪಕ್ಷ ಬಿಟ್ಟಿದ್ದಾರೆ. ಮತ್ತೊಬ್ಬ ಗ್ಯಾಸ್ ಬಾಬು ಅವರು ಪಕ್ಷದಲ್ಲಿ ಉಳಿದು ಶೀಘ್ರದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ತಿಂಗಳ 20 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಮ್ಮ ಅಭ್ಯರ್ಥಿ ಮಾಡಲಿದ್ದಾರೆ. ಅಂದು ಬೃಹತ್ ಮೆರವಣಿಗೆ ಮೂಲಕ ಆಗಮಿಸಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದ ಅವರು ಟಿಕೆಟ್ ಸಿಗಲಿಲ್ಲ ಎಂದು ಪಕ್ಷ ಬಿಟ್ಟು ಸಲ್ಲದ ದೂರು ಹೇಳುವುದು ಸರಿಯಲ್ಲ. ಮಾಧುಸ್ವಾಮಿ ಅವರ ಮೇಲೆ ದೂರುವ ಮುನ್ನ ಸರಿಯಾದ ಮಾಹಿತಿ ಪಡೆಯಬೇಕು. ಸ್ವಜಾತಿ ವ್ಯಾಮೋಹ ಎನ್ನುವ ಬೆಟ್ಟಸ್ವಾಮಿ ಅವರನ್ನು ಎರಡು ಬಾರಿ ಅಭ್ಯರ್ಥಿ ಮಾಡಿದ್ದು ಸಂಸದ ಬಸವರಾಜು ಅವರು ಎಂಬುದು ಮರೆಯಬಾರದಿತ್ತು. ಈ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷದ ದಿಲೀಪ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರಪ್ಪ ಮಾತನಾಡಿ ಟಿಕೆಟ್ ಸಿಗಲಿಲ್ಲ ಎಂದು ಪಕ್ಷ ಬಿಡುವುದು ವೈಯಕ್ತಿಕ ದುರಾಸೆ ತೋರುತ್ತದೆ. ಮೂರು ಬಾರಿ ಸರ್ವೇ ನಡೆಸಿ ಟಿಕೆಟ್ ಫೈನಲ್ ಮಾಡಿರುವ ಪಕ್ಷ ಯಾವತ್ತೂ ಜಾತಿ ಪದ್ಧತಿ ಅಳವಡಿಸಿಲ್ಲ. ಈ ಹಿಂದಿನ ಅವಧಿಯಲ್ಲಿ ಮಾಡಿದ್ದ ಸರ್ವೇ ಬೆಟ್ಟಸ್ವಾಮಿ ಪರ ಬಂದ ಹಿನ್ನಲೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಸಿಕ್ಕಿಲ್ಲ. ಪಕ್ಷದಲ್ಲಿದ್ದು ತಮ್ಮ ಕೆಲಸ ಮುಂದುವರೆಸಿದ್ದರೇ ಅವರಿಗೆ ಗೌರವ ಹೆಚ್ಚುತ್ತಿತ್ತು. ಕಾಡು ಗೊಲ್ಲರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದ ಕಾರ್ಯ ಬಿಜೆಪಿ ಸರ್ಕಾರ ಮಾಡಿದೆ. ನಮ್ಮಗಳ ಹಟ್ಟಿಯನ್ನು ಕಂದಾಯ ಗ್ರಾಮವಾಗಿ ಮಾಡಿದೆ. ನಿಗಮ ಮಂಡಳಿ ನೇಮಕ ಮಾಡಿದೆ. ಎಸ್ಟಿ ಸೇರಿಸಿ ಮೀಸಲು ಒದಗಿಸಲಿದೆ. ಇಂತಹ ಪಕ್ಷಕ್ಕೆ ನಾವು ಬದ್ಧರಾಗಿ ಕೆಲಸ ಮಾಡಬೇಕು ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಮಾಧುಸ್ವಾಮಿ ಅವರ ಮೇಲೆ ಮಾಡಿದ ಆರೋಪ ಸತ್ಯಕ್ಕೆ ದೂರವಾದದ್ದು. ಬಿಜೆಪಿ ಪಕ್ಷ ಯಾರ ಮಾತೂ ಕೇಳುವುದಿಲ್ಲ. ಸರ್ವೇ ಆಧಾರಿತ ಟಿಕೆಟ್ ನೀಡಿದೆ. ಅವರ ಭರವಸೆಯಂತೆ ಕ್ಷೇತ್ರ ಪ್ರಚಾರ ನಡೆಸಿ ಗೆಲುವು ಸಾಧಿಸುತ್ತೇವೆ ಎಂದ ಅವರು ಅಸಮಾಧಾನ ವ್ಯಕ್ತಪಡಿಸಿರುವ ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ನಮ್ಮ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಸಹ ಮನವಿ ಮಾಡಿದರೂ ಪಕ್ಷ ತೊರೆದರೆ ಬರಿಗೈಲಿ ಹೋಗಬೇಕು. ಅವರಿಗೆ ನಷ್ಟ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಜಿಪಂ ಮಾಜಿ ಸದಸ್ಯೆ ಯಶೋಧಮ್ಮ ಶಿವಣ್ಣ, ಗುಡ್ಡದಹಳ್ಳಿ ಬಸವರಾಜು, ಸುರೇಶ್, ಅ.ನ.ಲಿಂಗಪ್ಪ, ಭೀಮಶೆಟ್ಟಿ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಯತೀಶ್, ಗಂಗಣ್ಣ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ಮಂಜು ಗುಬ್ಬಿ