ಚಿಕ್ಕನಾಯಕನಹಳ್ಳಿ : ರಾಜ್ಯದಲ್ಲಿ ಕೊಬ್ಬರಿ ಬೆಲೆ ದಿನದಿಂದ ದಿನ ಪಾತಾಳಕ್ಕೆ ಕುಸಿಯಲು ಪ್ರಾರಂಭವಾಗಿದೆ. ಈ ನಷ್ಟವನ್ನು ಹಾಗು ತೆಂಗು ಬೆಳೆಗಾರರ ಹಿತ ಕಾಯಲು ಗುರುವಾರ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಸುಮಾರು ಹೊತ್ತು ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು. ರೈತರು ಕೊಬ್ಬರಿಗೆ ಬೆಂಬಲ ಬೆಲೆಯನ್ನು ಏರಿಸಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ.
ಕೇಂದ್ರ ಸರಕಾರ ಪುಡಿಗಾಸಿನ ಆಸೆ ತೋರಿಸಿದೆ. ಆದರೆ ರಾಜ್ಯ ಸರಕಾರ ಕೊಬ್ಬರಿ ಬೆಲೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಕೊಬ್ಬರಿ ನಫೆಡ್ ಕೇಂದ್ರದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ರಾಜ್ಯ, ಕೇಂದ್ರ,ಸರ್ಕಾರ ಮುಂದಾಗ ಬೇಕಿದೆ.
ತುಮಕೂರು ಕಲ್ಪತರು ನಾಡು ಎಂಬ ಹೆಗ್ಗಳಿಕೆಯ ಜಿಲ್ಲೆಯ ಕೊಬ್ಬರಿಗೆ ದೇಶದ್ಯಂತ ಬೇಡಿಕೆ ಇದ್ದರೂ ಬೆಲೆ ಮಾತ್ರ ಇಳಿಕೆಯಾಗುತ್ತಲೇ ಇದೆ. ಅಧಿಕಾರಕ್ಕೆ ಬಂದ ಸರ್ಕಾರಗಳಿಗೆ ಅನ್ನದಾತನ ರೈತನ ಬಗ್ಗೆ ಕಿಂಚಿತ್ತು ಕನಿಕರ ಇಲ್ಲವಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಅನುಕೂಲಕರ ದರ ಸಿಗದೆ ರೈತ ಅತಂತ್ರ ಸ್ಥಿತಿ ತಲುಪಿದ್ದಾನೆ ಎಂಬ ವಿಷಯಗಳ ಬಗ್ಗೆ ದೇವೇಗೌಡರ ಮಾನಸ ಪುತ್ರ ಶಾಸಕ ಸಿ ಬಿ ಸುರೇಶ್ ಬಾಬು ಚರ್ಚಿಸಿ ರಾಜ್ಯಸಭೆಯಲ್ಲಿ ನಮ್ಮ ಕೊಬ್ಬರಿ ಬೆಲೆಯ ಬಗ್ಗೆ ಧ್ವನಿ ಎತ್ತಿ ದರ ನಿಗದಿಪಡಿಸಲು ಒತ್ತಾಯಿಸುವಂತೆ ಮನವರಿಕೆ ಮಾಡಿಕೊಟ್ಟರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.