ಮಧುಗಿರಿ - ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಕ್ಷರ ದಾಸೋಹ ಅಡುಗೆ ನೌಕರರ ಸಂಘ ಹಾಗೂ ಸಿಐಟಿಯು ವತಿಯಿಂದ ಜು.11 ರಂದು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷೆ ನಾಗರತ್ನ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಿ ತಡೆಗಟ್ಟಲು ಹಾಗೂ ಅಪೌಷ್ಟಿಕತೆ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ ಸುಮಾರು 1 ಲಕ್ಷ 17 ಸಾವಿರ ಮಹಿಳೆಯರು ಲಕ್ಷಾಂತರ ಬಡವ, ರೈತ, ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಚತೆ ಕಾಪಾಡಿಕೊಂಡು ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ, ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಪರಿಶ್ರಮ ಹಾಕಿದ್ದಾರೆ. ದಿನಕ್ಕೆ ಸುಮಾರು 6 ಗಂಟೆ lಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಇವರ ಪರಿಶ್ರಮ ಗುರುತಿಸಿ ಕನಿಷ್ಠ ಕೂಲಿ 21 ಸಾವಿರ ನೀಡಬೇಕು, ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ಜವಾಬ್ದಾರಗೆ ಸಂಪೂರ್ಣವಾಗಿ ತಂದು ಇವರ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಿಂದ ತಾಲೂಕು ಪಂಚಾಯಿತಿ ಕಚೇರಿ ವರೆಗೂ ಮೆರವಣಿಗೆ ನಡೆಸಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದ್ದು ಅಕ್ಷರ ದಾಸೋಹ ನೌಕರರು ಹಾಗೂ ಸಿಐಟಿಯು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ವರದಿ ಮಧುಗಿರಿ ಬಾಲು ಪಣಿಂದ್ರ.