ಮಧುಗಿರಿ : ಮಧುಗಿರಿಯು ಸ್ವತಂತ್ರಪೂರ್ವದಿಂದ ಉಪವಿಭಾಗವಾಗಿದ್ದು, ಕಂದಾಯ ಜಿಲ್ಲಾ ಕೇಂದ್ರ ಮಾಡಲು ತಯಾರಿ ನಡೆದಿದೆ ಎಂದು ಸಹಕಾರ ಸಚಿವ ಕ್ಷೇತ್ರದ ಶಾಸಕರಾದ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಕಾರ್ಮಿಕ ಇಲಾಖೆಯ ಆವರಣದಲ್ಲಿ ಕಟ್ಟಡ ಕಾರ್ಮಿಕರ 9-12 ತರಗತಿಯ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿ ಮಾತನಾಡಿದ ಅವರು, ಕಂದಾಯ ಉಪವಿಭಾಗಕ್ಕೆ ತನ್ನದೇ ಆದ ಇತಿಹಾಸವಿದ್ದು ಸಿಇಓ, ಡಿಸಿ, ಹಾಗೂ ಎಸ್ಪಿ ಕಚೇರಿ ಹೊರತುಪಡಿಸಿ ಉಳಿದ ಎಲ್ಲ ಕಚೇರಿಗಳು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನವಾಗಿದ್ದು, ಶೀಘ್ರ ಕಂದಾಯ ಜಿಲ್ಲಾ ಕೇಂದ್ರವಾಗಿಸಲು
ಎಲ್ಲ ಪ್ರಯತ್ನ ನಡೆದಿದೆ. ನಾನು ಚುನಾವಣೆಯಲ್ಲಿ ಹೇಳಿದಂತೆ ನುಡಿದಂತೆ ಕ್ಷೇತ್ರದ ಕೆರೆಗಳಿಗೆ ನೀರು, ಕೈಗಾರಿಕೆ ಸ್ಥಾಪಿಸಿ ಕ್ಷೇತ್ರದಲ್ಲೇ ಉದ್ಯೋಗ ನೀಡಿ ಮಾತು ಉಳಿಸಿಕೊಂಡು, ಪ್ರತಿ ಗ್ರಾಮದಲ್ಲಿ ನಿವೇಶನ, ಮನೆ ನಿರ್ಮಾಣ, ಸ್ಮಶಾನ, ಹಾಗೂ ಶಾಲೆ ಅಭಿವೃದ್ಧಿಗೆ ಕ್ರಮವಹಿಸುತ್ತೇನೆ ಎಂದರು.
ಮುಂಗಾರು ತಡವಾದರೂ ಮಳೆ ಬರುವ ನಿರೀಕ್ಷೆಯಿದೆ. ಬರಗಾಲ ಬಂದರೂ 5 ವರ್ಷ ಕುಡಿಯುವ ನೀರಿಗೆ ಸಮಸ್ಯೆಯಿಲ್ಲದಂತೆ ಅಂತರ್ಜಲವಿದೆ. ವಿದ್ಯೆ ಸಾಧಕನ ಸ್ವತ್ತು ಅದು ಸೋಮಾರಿಗಳ ಸ್ವತ್ತಲ್ಲ. ಶಿಕ್ಷಣಕ್ಕೆ ಹೆಚ್ಚಿನ ಶಕ್ತಿಯಿದ್ದು ಅದನ್ನು ಪಡೆದು ಸಮಾಜದ ಆಸ್ತಿಗಳಾಗಬೇಕು. ಸರ್ಕಾರ ಶಿಕ್ಷಣಕ್ಕೆ ಎಲ್ಲ ಸೌಕರ್ಯಗಳನ್ನು ನೀಡುತ್ತಿದೆ. ಕಾರ್ಮಿಕರು ಕುಡಿತ ಬಿಟ್ಟು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ದುಶ್ಚಟ ಕಡಿಮೆ ಮಾಡಿದರೆ ಸಧೃಡ ಸಂಸಾರ ನಿಮ್ಮದಾಗಲಿದೆ. ಯಾರಾದರೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಿ ಕೆಲಸಕ್ಕೆ ಕಳಿಸಿದರೆ ಜೈಲಿಗೆ ಹಾಕಲಾಗುತ್ತದೆ. ಮಕ್ಕಳು ವಿದ್ಯಾವಂತರಾದರೇ ಸಮಾಜಕ್ಕೆ ಆಸ್ತಿಯಾಗಲಿದ್ದು, ಅವಿದ್ಯಾವಂತರು ಸಮಾಜಕ್ಕೆ ಹೊರೆಯಾಗಲಿದ್ದಾರೆ. ನನ್ನ ಕಳೆದ ಅವಧಿಯಲ್ಲಿ ವಿದ್ಯಾಜ್ಯೋತಿ ಯೋಜನೆಯಂತೆ 3520 ಕಲಿಯುವ ಮಕ್ಕಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೆ. ಅಲ್ಲದೆ ಎಲ್ಲ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ್ದೆ. ಈಗ ಮತ್ತೆ ಆರಂಭಿಸುತ್ತೇನೆ. ಈ ಕಿಟ್ ಬಿಜೆಪಿ ಸರ್ಕಾರದಲ್ಲಿ ತಯಾರಾಗಿದ್ದು ಯಾರೇ ಶಿಕ್ಷಣಕ್ಕೆ ನೆರವು ನೀಡಿದರೂ ಅದನ್ನು ಒಪ್ಪಬೇಕು. ನೋಟ್ ಬುಕ್ ಮೇಲೆ ಬಿಜೆಪಿ ಲಾಂಛನ ಇರುವುದು ಸಮಸ್ಯೆಯಲ್ಲ. ಬದಲಿಗೆ ಕಲಿಕೆಗೆ ಪುಸ್ತಕ ಸಿಕ್ಕರೇ ಅದೇ ಸಾಕು, ಇದಕ್ಕೆ ನನ್ನ ತಕರಾರು ಇಲ್ಲ ಎಂದರು.
ಸಂಸದ ಜಿ.ಎಸ್.ಬಸವರಾಜು 20 ವರ್ಷ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, 3 ಬಾರಿ ಸಂಸದರಾಗಿದ್ದಾರೆ. ಅವರು ಬಿಜೆಪಿಯಲ್ಲಿದ್ದರೂ ಸದಾ ನಮಗೆ ಸಹಕಾರ ನೀಡುತ್ತಿದ್ದಾರೆ. ಮಧುಗಿರಿಯ ಶಾಶ್ವತ ನೀರಾವರಿ ಸಮಸ್ಯೆ ನಿವಾರಣೆಗೆ ನಮಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಮಿಕರ ಮಕ್ಕಳು ಸಾಧನೆ ಮಾಡಲು ಕಠಿಣ ಪರಿಶ್ರಮವೊಂದೆ ಸಾಕಾಗಿದ್ದು, ಸಾಧನೆಗೆ ಬಡತನ ಅಡ್ಡಿಯಲ್ಲ. ಇಲಾಖೆಯ ಸೌಲಭ್ಯ ಎಲ್ಲೂ ದುರುಪಯೋಗ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಯಾರೂ ಕಿತ್ತಾಡದೆ ತುಮಕೂರು ಜಿಲ್ಲೆಯನ್ನು 3 `ಜಿಲ್ಲೆ ಮಾಡಿ ಮಧುರಿಯನ್ನು ಜಿಲ್ಲೆ ಮಾಡಿದರೆ ಸಮಸ್ಯೆಯಿಲ್ಲ. ಮಧುಗಿರಿಯ ಉಪವಿಭಾಗದ ಇತಿಹಾಸ ಬಹುದೊಡ್ಡದಾಗಿದ್ದು, ಜಿಲ್ಲೆಯಾಗಬೇಕಿದೆ. ಕಾರ್ಮಿಕ ಇಲಾಖೆಯಲ್ಲಿ 80 ಸಾವಿರ ಕೋಟಿ ಅನುದಾನವಿದ್ದು, ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಕರ್ಯವನ್ನು ಸರ್ಕಾರ ನೀಡಲಿದ್ದು ಸದುಪಯೋಗ ಮಾಡಿಕೊಳ್ಳಿ ಎಂದರು.
ಉಪವಿಭಾಗಧಿಕಾರಿ ರಿಷಿ ಆನಂದ್ ಮಾತನಾಡಿ, ರಾಜ್ಯದ ಅಭಿವೃದ್ಧಿಯಲ್ಲಿ ಕಾರ್ಮಿಕ ಇಲಾಖೆಯ ಕೊಡುಗೆ ಹೆಚ್ಚಾಗಿದೆ. ಈಗ ಅವರ ಮಕ್ಕಳ ಭವಿಷ್ಯ ಕೂಡ ಶಿಕ್ಷಣದ ಮೇಲಿದ್ದು, ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತಿರಲಿ ಎಂದರು.
ಉಪವಿಭಾಗದ ಕಾರ್ಮಿಕ ಅಧಿಕಾರಿ ತೇಜಾವತಿ ಮಾತನಾಡಿ ಈ ಕೇಂದ್ರ ಮಧುಗಿರಿಗೆ ಬರಲು ಆಯುಕ್ತರಾದ ಅಕ್ರಂ ಪಾಷರವರ ಕೊಡುಗೆ ಹೆಚ್ಚಾಗಿದೆ. ಕಟ್ಟಡವಿಲ್ಲದ ಇಲಾಖೆಗೆ ಸಚಿವರಾದ ಕೆ.ಎನ್.ರಾಜಣ್ಣನವರು ಕಟ್ಟಡ ಕೊಡಿಸಿದ್ದಾರೆ, ಇಂತಹ ಅಧಿಕಾರಿಗಳು ಹಾಗೂ ರಾಜಕಾರಣ ಗಳು ಇದ್ದರೆ ನಾಡಿನ ಅಭಿವ್ರದ್ಧಿ ಹೆಚ್ಚಾಗಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಗ್ಬತ್‍ವುಲ್ಲಾ, ಮುಖಂಡರಾದ ತುಂಗೋಟಿ ರಾಮಣ, ಪುರಸಭೆ ಮಾಜಿ ಅಧ್ಯಕ್ಷ ಅಯೂಬ್, ಗಂಗಣ್ಣ, ಸದಸ್ಯರಾದ ರಾಮು, ಅಲೀಂ, ಪಾಷಾ, ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ರವಿಕುಮಾರ್, ತಾಲೂಕು ಅಧಿಕಾರಿ ಶ್ರೀಕಾಂತ್, ಸಿಪಿಐ ಹನುಮಂತರಾಯಪ್ಪ, ಪಿಎಸೈ ವಿಜಯಕುಮಾರ್, ಕಾರ್ಮಿಕರು, ಮಕ್ಕಳು ಜೊತೆಗಿದ್ದರು.
ವರದಿ ಮಧುಗಿರಿ ಬಾಲು ಪಣಿಂದ್ರ