ಗುಬ್ಬಿ:ಎಲ್ಲಾ ಸವಲತ್ತುಗಳು ಇದ್ದರೂ ಸಹ ಸರಳ ಜೀವನವನ್ನು ಮೈಗೂಡಿಸಿಕೊಂಡು ದೇಶಕ್ಕೆ ಮಾದರಿಯಾದ ಇಬ್ಬರೂ ದೇಶಪ್ರೇಮಿಗಳಾದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಇಂದು ದೇಶದೆಲ್ಲೆಡೆ ಆಚರಿಸುತ್ತಿದ್ದು ಅವರ ಸರಳ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಿ ಆರತಿ ಕರೆ ನೀಡಿದರು.
ಗಾಂಧಿ ಜಯಂತಿಯಂದು ಬಾಪುಜಿ ಅವರ ಶಾಂತಿಯ ತತ್ವಗಳು ಜಾಗತಿಕವಾಗಿ ಈಗಲೂ ಪ್ರಸ್ತುತವಾಗಿದ್ದು, ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಿವೆ ಎಂದು ತಿಳಿಸಿದ ಅವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಅವರಿಗೆ ನಮನ ಸಲ್ಲಿಸುವ ಮೂಲಕ ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿದ್ದ ಅವರ ಜೀವನವು ಈ ದೇಶ ವಾಸಿಗಳಿಗೆ ಸದಾಕಾಲಕ್ಕೂ ಸ್ಫೂರ್ತಿಯ ಮೂಲವಾಗಿ ಉಳಿಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತ ವತಿಯಿಂದ ಕಂದಾಯ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಿಸುವ ಮೂಲಕ ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಖಾನ್, ಶ್ರೀರಂಗ, ಕಂದಾಯ ನಿರೀಕ್ಷಕ ರಮೇಶ್ ಕುಮಾರ್ ಹಾಗೂ ಇತರರು ಇದ್ದರು.
