ಚಿಕ್ಕನಾಯಕನಹಳ್ಳಿಯಲ್ಲಿ ಅದ್ದೂರಿ ಗಣರಾಜ್ಯೋತ್ಸವ ಆಚರಣೆಗೆ ತೀರ್ಮಾನ

ಚಿಕ್ಕನಾಯಕನಹಳ್ಳಿ: ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಿಸಲು ತಾಲೂಕು ಆಡಳಿತ ತೀರ್ಮಾನಿಸಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಹಸೀಲ್ದಾರ್ ಬಿ. ತೇಜಸ್ವಿನಿ ಚೂಚನೆ ನೀಡಿದರು.



ತಾಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವ ಸಿದ್ಧತೆ ಸಭೆಯಲ್ಲಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಜವಾಬ್ದಾರಿ ನೀಡಲಾಯಿತು. 


ವೇದಿಕೆ ನಿರ್ಮಾಣ, ಧ್ವನಿವರ್ಧಕದ ವ್ಯವಸ್ಥೆ ಮಾಡಲು ಪುರಸಭೆ ಮುಖ್ಯಾಧಿಕಾರಿ, ಸಾಂಸ್ಕೃತಿಕ ಕಾರ್ಯಕ್ರಮದ ಹೊಣೆಯನ್ನು ಬಿಇಓಗೆ ಕೊಡಲಾಯಿತು.


ಸಿಹಿ ಸಿದ್ಧಪಡಿಸಿ ಶಾಲಾ ಮಕ್ಕಳು, ಸಾರ್ವಜನಿಕರಿಗೆ ವಿತರಿಸುವ ಜವಾಬ್ದಾರಿಯನ್ನು ತಹಸೀಲ್ದಾರ್ ಬಿ.ತೇಜಸ್ವಿನಿ ಹಾಗೂ ಸಿಪಿಐ ನಿರ್ಮಲಾ ಅವರಿಗೆ ವಹಿಸಲಾಯಿತು.


ಗಣರಾಜ್ಯೋತ್ಸವ ಆಚರಣೆ ಬಗ್ಗೆ ಸರ್ಕಾರ ನೀಡಿರುವ ಸೂಚನೆಗಳನ್ನು ಆರಂಭದಲ್ಲಿ ಓದಿ ತಿಳಿಸಿದ ತಹಸೀಲ್ದಾರ್,


ಸಚಿವ ಜೆ.ಸಿ. ಮಾಧುಸ್ವಾಮಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪೋಲೀಸ್, ಗೃಹ ರಕ್ಷಕ ದಳ ಹಾಗೂ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಲಿದೆ. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಿಹಿ ವಿತರಣೆಯಿದೆ ಎಂದು ತಿಳಿಸಿದರು.

ಸಂಜೆ ಕನ್ನಡ ಸಂಘದ ವೇದಿಕೆಯಲ್ಲಿ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘದ ಶಾಂತಕುಮಾರ್ ಹೇಳಿದರು.

ನ್ಯಾ. ನಾಗಮೋಹನದಾಸ್ ಅವರ ಸಂವಿಧಾನ ಓದು ಕೃತಿಯ ಪ್ರಚಾರ ನಿಮಿತ್ತ ಸಮಾರಂಭದಲ್ಲಿ ಸಾಂಕೇತಿಕವಾಗಿ ವಿತರಿಸಲು ತಮಗೆ ಅವಕಾಶಕೊಡಬೇಕೆಂದು ರಾಜ್ಯ ರೈತ ಸಂಘದ ತಾಲೂಕು ಸಂಚಾಲಕ ಎ.ಎನ್. ಕುಮಾರಯ್ಯ ಕೇಳಿದರು. ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ ಎಂದು ಸಚಿವರು ನಿರಾಕರಿಸಿದರು. 


ಈ ವೇಳೆ ಪುರಸಭಾ ಉಪಾಧ್ಯಕ್ಷೆ ಮಮತಾ ಧ್ರುವ ಕುಮಾರ್ ತಾ.ಕಸಾಪ ಅಧ್ಯಕ್ಷ ಎಂ. ಎಸ್.ರವಿಕುಮಾರ್ ಕಟ್ಟೆ ಮನೆ, ಕನ್ನಡ ಸಂಘದ ವೇದಿಕೆ ಅಧ್ಯಕ್ಷ ರೇಣುಕಸ್ವಾಮಿ, ಇನ್ನಿತರ ಸಂಘಟನೆಗಳ ಮುಖಂಡರಾದ ಬೇವಿನಹಳ್ಳಿ ಚನ್ನಬಸವಯ್ಯ, ಲಿಂಗರಾಜು, ಗೋಡೆಕೆರೆ ವಸಂತಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.



ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು