ಚಿಕ್ಕನಾಯಕನಹಳ್ಳಿ: ಆಸೆ ಆಮೀಷಗಳನ್ನು ಒಡ್ಡಿ ಮತಾಂತರ ಮಾಡಬಾರದು.ಹಾಗೇನಾದರು ಕಂಡುಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಹಾಗೂ ಈ ರೀತಿಯಲ್ಲಿ ಮತಾಂತರಗೊಂಡವರಿಗೆ ಈ ಹಿಂದೆ ಸಿಗುತ್ತಿದ್ದಂತಹ ಸೌಲಭ್ಯಗಳು ಸಿಗುವುದಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ ಎಸ್ಟಿ ಯವರು ಯಾರಾದರು ಮತಾಂತರ ಗೊಂಡರೆ ಅದು ಕಾನೂನು ರೀತಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿ ಆಗಬೇಕು ಹಾಗೂ ಈ ರೀತಿಯಲ್ಲಿ ಮತಾಂತರ ಗೊಂಡವರಿಗೆ ಯಾವುದೇ ಧರ್ಮದವರು ಆಸೆ ಆಮೀಷಗಳನ್ನು ತೋರಿಸುವಂತಿಲ್ಲ ಹಾಗೇನಾದರು ಮತಾಂತರಗೊಂಡರೆ ಈ ಹಿಂದೆ ಅವರಿಗೆ ನೀಡಲಾಗುತ್ತಿದ್ದಂತಹ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದ ಅವರು ಯಾವುದಾದರು ದೌರ್ಜನ್ಯಗಳು ನಡೆದರೆ ಮಾಹಿತಿ ತಿಳಿಸಿ ಎಂದರು.
ದ.ಸಂ.ಸ.ಯ ಸಂಚಾಲಕ ಸಿ.ಎಸ್.ಲಿಂಗದೇವರು ಮಾತನಾಡಿ, ಕ್ರೀಶ್ಚಿಯನ್ ಮಿಷನರಿಗಳು ಪಟ್ಟಣದಲ್ಲಿರುವ ಕೆಲವು ಬಡತನದಲ್ಲಿರುವ ಎಸ್ಸಿ ಎಸ್ಟಿ ಜನದವರನ್ನು ಗುರುತಿಸಿ ಹಣದ ಆಮಿಷ ಒಡ್ಡಿ ಮತಾಂತಾರ ಗೊಳಿಸುತ್ತಿದ್ದಾರೆ ಈ ಬಗ್ಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಹಾಗೂ ಉಪನೊಂದಣಿ ಇಲಾಖೆಯಲ್ಲಿ ಬ್ಯಾಂಕಿನಿಂದ ಸಾಲ ಪಡೆದಿರುವಂತಹ ಜಮೀನುಗಳು ಸಹ ನೊಂದಣಿ ಮಾಡುತ್ತಿದ್ದಾರೆ ಈ ಬಗ್ಗೆ ಗಮನಹರಿಸುವಂತೆ ತಿಳಿಸಿದರು.
ರಾಜ್ಯ ಮಾದಿಗ ದಂಡೋರದ ರಾಜ್ಯ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಪಟ್ಟಣದಲ್ಲಿ ಸುಸಜ್ಜಿತ ಬಾಬು ಜಗಜೀವನ ರಾಂ ಭವನ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಈಗಾಗಲೇ ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಎಸ್ಸಿ ಎಸ್ಟಿ ಜನರಿಗೆ ಭೂಮಿ ಮಂಜೂರು ಮಾಡಬೇಕು ಇದರೊಂದಿಗೆ ಮಂಜೂರಾತಿ ನೀಡಿರುವಂತಹ ರೈತರಿಗೆ ಖಾತೆ ಮಾಡಿಕೊಡಬೇಕೆಂದು ತಿಳಿಸಿದರು.
ಕಲಾವಿದ ಸಿ.ಎಸ್.ಗಂಗಾಧರ್ ಮಾತನಾಡಿ, ಹಂದನಕೆರೆ ದಲಿತ ಕಾಲೋನಿಗೆ ಸ್ಮಶಾನ ಮಂಜೂರು ಮಾಡಬೇಕು ಇದರೊಂದಿಗೆ ಕೃಷಿ ಇಲಾಖೆಯಲ್ಲಿ ಟ್ರ್ಯಾಕ್ಟರ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೃಷಿ ಇಲಾಕೆಯ ಸಹಾಯಕ ನಿರ್ದೇಶಕ ಹನುಮಂತರಾಜು ಮಾತನಾಡಿ, ವರ್ಷದ ಬಜೆಟ್ ನಲ್ಲಿ ಪ್ರತಿ ವರ್ಷ ಒಂದು ಟ್ರ್ಯಾಕ್ಟರ್ ಮಾತ್ರ ಬರುತ್ತದೆ ಅದರಂತೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಅದರಲ್ಲಿ ಹಿರಿಯ ಪ್ರಾಶಸ್ತ್ಯದ ಅದರದ ಮೇಲೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಹೆಚ್.ಟಿ.ನಾಗರಾಜು ಮಾತನಾಡಿ, ಹಂದನಕೆರೆ ಹೋಬಳಿ ಕೇಂದ್ರಕ್ಕೆ ಜನೌಷಧಿ ಕೇಂದ್ರವನ್ನು ಮಂಜೂರು ಮಾಡುವಂತೆ ಕೋರಿದ ಅವರು ಎಸ್ಸಿ ಎಸ್ಟಿಯವರಿಗೆ ಪ್ರತ್ಯೆಕ ಸ್ಮಾಶಾನ ನೀಡುವಂತೆ ಮನವಿ ಮಾಡಿದರು.
ಸಚಿವರು ಮಾತನಾಡಿ ಈ ಹಿಂದೆ 2013ರಿಂದ 2017ರವರೆಗೆ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಲು ಸಾದ್ಯವಿಲ್ಲ ಅವುಗಳು ಪರೀಶಿಲನೆಯಲ್ಲಿವೆ ಹಾಗೂ ಹಂತ ಹಂತವಾಗಿ ಈಗಾಗಲೇ ಬಗರ್ ಹುಕುಂ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂದ ಅವರು ಉಪನೊಂದಣಿ ಇಲಾಖೆಯ ಅಧಿಕಾರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಹಾಗೂ ಅಕ್ರಮವಾಗಿ ನೊಂದಣಿಯಾಗಿರುವಂತಹ ಮೂರು ಪ್ರಕರಣಗಳನ್ನು ರದ್ದು ಪಡಿಸುವಂತೆ ಈಗಾಗಲೇ ಮೇಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು
ಬಾಬು ಜಗಜೀವನರಾಮ್ ಭವನ ನಿರ್ಮಿಸಲು ನಿವೇಶನದ ಕೊರತೆ ಇದ್ದು ಈಗ ಅದನ್ನು ಖಾಸಗಿ ನಿವೇಶನದಲ್ಲಿ ಸಿಎ ನಿವೇಶನದ ಪಕ್ಕದಲ್ಲಿ ನಿವೇಶನ ಖರೀದಿಸುವುದು ಇಲ್ಲವೇ ಭೂಸ್ವಾಧೀನ ಪಡಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ತಿಪಟೂರು ಉಪವಿಭಾಗಾಧಿಕಾರಿ ಕಲ್ಪಶ್ರೀ, ಇಒ ವಸಂತ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ದಿನೇಶ್, ಮುಖಂಡರುಗಳಾದ ರಂಗನಾಥ್, ಗೋ.ನಿ.ವಸಂತ್ ಕುಮಾರ್, ಸೇರಿದಂತೆ ಮತ್ತಿತರರು ಇದ್ದರು.
ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು
