ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 'ಸಾಹಿತ್ಯ ಜೋಳಿಗೆ' ಭಿಕ್ಷಾ ಅಭಿಯಾನ.
ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆಬೀಡದ ಚಿಕ್ಕನಾಯಕನಹಳ್ಳಿಯಲ್ಲಿ ಇಲ್ಲಿಯವರೆಗೆ 9 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಾಗಿದ್ದು ಹತ್ತನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಲೇಖಕರು ಹಾಗೂ ಚರಿತ್ರೆಯ ಸಂಶೋಧಕರು ಆದ ತಿಮ್ಮನಹಳ್ಳಿ ಡಾ.ವೇಣುಗೋಪಾಲ್ ರವರ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 4 ಮತ್ತು 5 ಫೆಬ್ರವರಿ2023 ರಂದು ಚಿಕ್ಕನಾಯಕನಹಳ್ಳಿಯ ಕನ್ನಡ ಸಂಘದ ವೇದಿಕೆಯಲ್ಲಿ ಆಯೋಜಿಸಿದೆ.
ಈ ಸಮ್ಮೇಳನದ ಆಯೋಜನೆಗೆ ಸುಮಾರು 5 ಲಕ್ಷ ರೂಪಾಯಿಗಳ ಅಂದಾಜು ವೆಚ್ಚವನ್ನು ನಿರೀಕ್ಷಿಸಿದ್ದು,
ಈ ಮೊತ್ತವನ್ನು ಸಾರ್ವಜನಿಕವಾಗಿ ರೈತ ಉತ್ಪನ್ನಗಳನ್ನು ಭಿಕ್ಷಾ ರೂಪದಲ್ಲಿ ಸಂಗ್ರಹಿಸುವ ಮೂಲಕ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮ್ಮೇಳನವನ್ನು ಆಯೋಜಿಸಬೇಕೆಂಬ ಆಶಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನದ್ದಾಗಿದೆ.
ದಿನಾಂಕ 11 ಫೆಬ್ರವರಿ 2023 ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಹುಳಿಯಾರು ಹೋಬಳಿ ಸಿಂಗಾಪುರದಲ್ಲಿ ಈ ನಾಡು ಕಂಡ ನೆಲ ಮೂಲ ಸಂಸ್ಕೃತಿಯ ಚಿಂತಕ, ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯನವರು ಕ ಸಾ ಪ ಜಿಲ್ಲಾಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪನವರಿಗೆ ತೆಂಗಿನಕಾಯಿಗಳನ್ನು ಭಿಕ್ಷಾ ರೂಪದಲ್ಲಿ ನೀಡುವ ಮೂಲಕ 'ಸಾಹಿತ್ಯ ಜೋಳಿಗೆ' ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಈ ಅಪರೂಪದ ವಿಶಿಷ್ಟ ಹಾಗೂ ಅರ್ಥಪೂರ್ಣ ಅಭಿಯಾನ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮ್ಮೇಳನವನ್ನು ರೂಪಿಸುವುದಕಷ್ಟೇ ಸೀಮಿತವಾಗದೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯಾಗಿದೆ.
ಆದ್ದರಿಂದ ಈ ಸಮ್ಮೇಳನಕ್ಕೆ ತಾಲ್ಲೂಕಿನ ಎಲ್ಲಾ ಜನತೆ ವಿಶೇಷವಾಗಿ ನಮ್ಮ ಬೆನ್ನೆಲುಬಾದ ರೈತರು ಕಾಯಿ, ದವಸ-ಧಾನ್ಯ, ಬೇಳೆ-ಕಾಳು ಹೀಗೆ ಬೆಳೆದ ಬೆಳೆಯ ಬೊಗಸೆಯಷ್ಟು ಭಿಕ್ಷೆಯನ್ನು ಅಕ್ಷರ ದಾಸೋಹಕ್ಕಾಗಿ 'ಸಾಹಿತ್ಯ ಜೋಳಿಗೆಗೆ' ಹಾಕಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮದಾಗಿಸಿಕೊಳ್ಳಬೇಕೆಂದು ತಾಲ್ಲೂಕು ಕ ಸಾ ಪ ಅಧ್ಯಕ್ಷ ಎಂ ಎಸ್ ರವಿಕುಮಾರ್ ಕಟ್ಟೆಮನೆ ವಿನಂತಿಸಿದ್ದಾರೆ.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.
