ಮಧುಗಿರಿ ಕ್ಷೇತ್ರಕ್ಕೆ 16400 ಮನೆಗಳನ್ನು ನನ್ನ ಅವಧಿಯಲ್ಲಿ ತಂದಿದ್ದು ಪಕ್ಷ-ಜಾತಿ ನೋಡದೆ ಅಭಿವೃದ್ಧಿ ಮಾಡಿದ್ದೆ ಮಾಜಿ ಶಾಸಕ ಕೆ ಎನ್ ಆರ್.

 ಮಧುಗಿರಿ : ಕಳೆದ ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ 16400 ಮನೆಗಳನ್ನು ತಂದಿದ್ದು ಪಕ್ಷ-ಜಾತಿ ನೋಡದೆ ಅಭಿವೃದ್ಧಿ ಮಾಡಿದ್ದು ಈ ಬಾರಿ ನನ್ನ ಗೆಲುವಿಗೆ ಸಹಕಾರ ನೀಡುವಂತೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮನವಿ ಮಾಡಿದರು.


ತಾಲೂಕಿನ ಮಿಡಿಗೇಶಿ ಹೋಬಳಿಯ ಚೆನ್ನಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಅವಧಿಯಲ್ಲಿ ನಾನು ಕ್ಷೇತ್ರಕ್ಕೆ ತಂದ 16400 ಮನೆಗಳು ತಂದಿದ್ದು ಈಗ 5 ವರ್ಷದಲ್ಲಿ ಎಷ್ಟು ಮನೆ ಬಂದಿದೆ ಎಂದು ನೀವೆ ನೋಡಬಹುದು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಮಹಿಳೆಗೆ 2 ಸಾವಿರ ಹಾಗೂ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ನೀಡುತ್ತೇವೆ. ನನ್ನ ಅವಧಿಯಲ್ಲಿ ಶೇ.100 ರಷ್ಟು ಬಿಪಿಎಲ್ ಕಾರ್ಡ ನೀಡಿದ್ದು ಆದರೆ ಈಗ ಕಾರ್ಡ ನೀಡಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿನ ಯುವಕರು ಬುದ್ಧಿವಂತರಿದ್ದು ಈ ಬಾರಿ ಅಭಿವೃದ್ಧಿಗೆ ಮತ ನೀಡುತ್ತಾರೆ. ಇಂದು ಈ ಗ್ರಾಮದ ಅನೇಕ ಯುವಕರು ಕಾಂಗ್ರೆಸ್‍ಗೆ ಸೇರಿದ್ದು ಹಿರಿಯರ ಮಾರ್ಗದರ್ಶನದಂತೆ ಬಹುಮತ ನೀಡುವ ವಿಶ್ವಾಸವಿದೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡಿಸಿ, ಕೆರೆಗಳಿಗೆ ನೀರು ಹರಿಸಿ, ಬೆಟ್ಟಕ್ಕೆ ರೋಪ್ ವೇ, ಉದ್ಯೋಗ ಸೃಷ್ಟಿಸಿ ಕ್ಷೇತ್ರಕ್ಕೆ ರೈಲು ತರುತ್ತೇನೆ. ಈಗ ಪ್ರತಿ ಗ್ರಾಮದ ಸಮಸ್ಯೆಗಳ ಪಟ್ಟಿ ಪಡೆಯುತ್ತಿದ್ದು ಶಾಸಕನಾದ ನಂತರ ಅನುಷ್ಠಾನಗೊಳಿಸುತ್ತೇನೆ. ಜಿಲ್ಲೆಯಲ್ಲಿ ಮಧುಗಿರಿಗೆ ಹೆಚ್ಚು ಸಾಲ ನೀಡಿದ್ದು ಮತಗಳ ನಿರೀಕ್ಷೆಯಿಂದ ಸಾಲ ನೀಡದೆ ರೈತರ ಬದುಕು ಹಸನಾಗಲು ನೀಡಿದ್ದೇನೆ. ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ 73 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ 1 ರಿಂದ 2 ಲಕ್ಷದವರೆಗೂ ಸಾಲಮನ್ನಾ ಮಾಡಿದ್ದರು. ಆದರೆ ಬಿಜೆಪಿಯ ಪ್ರಧಾನಿ ನರೇಂದ್ರಮೋದಿ ಮಾತ್ರ ರೈತರನ್ನು ನಿರ್ಲಕ್ಷಿಸಿ ಕೈಗಾರಿಕೋದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿರುವುದು ಯಾವ ನ್ಯಾಯ ಎಂದರು. 


ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ. ಮಾಜಿ ಸದಸ್ಯ ರಾಜು, ಕಳೆದ 3 ಚುನಾವಣೆಯಲ್ಲೂ ಈ ಗ್ರಾಮ ಕೆಎನ್‍ಆರ್‍ಗೆ ಬಹುಮತ ನೀಡಿಲ್ಲ. ಆದರೂ ಶಾಸಕರಾದ ನಂತರ ಅಭಿವೃದ್ಧಿ ಕೆಲಸ ಮಾಡಿದ್ದರು. ಯುವಕರ ಶಕ್ತಿಯನ್ನು ಚುನಾವಣೆಯಲ್ಲಿ ಪ್ರಧಾನವಾಗಿ ಬಳಸಿಕೊಂಡು ಅಭಿವೃದ್ಧಿ ಮಾಡಬೇಕು. ಇದು ರಾಜಣ್ಣನವರ ಕೊನೆಯ ಚುನಾವಣೆಯಾಗಿದ್ದು ಆಶೀರ್ವದಿಸಿದರೆ ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದಾರೆ ಎಂದರು.


ಜಿ.ಪಂ. ಮಾಜಿ ಸದಸ್ಯ ಜಿ.ಜೆ.ರಾಜಣ್ಣ ಮಾತನಾಡಿ, ಯುವಶಕ್ತಿ ಇರುವ ಕಡೆ ಗೆಲುವಿರುತ್ತದೆ. ಅದರಂತೆ ಪಕ್ಷಕ್ಕೆ ಯುವಕರ ಸೇರ್ಪಡೆ ಹೆಚ್ಚಾಗಿದ್ದು ಕೆಎನ್‍ಆರ್ ಗೆಲುವು ನಿಶ್ಚಿತ. ಕ್ಷೇತ್ರದ ರೈತರ 175 ಕೋಟಿ ಸಾಲ ಮನ್ನವಾಗಿದ್ದು ರೈತರು ರಾಜಣ್ಣನವರನ್ನು 

ನೆನೆಯಬೇಕು ಎಂದರು.


ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ ಮಾತನಾಡಿ, ಕೆ.ಎನ್.ರಾಜಣ್ಣ ಒಬ್ಬ ಬಲಿಷ್ಟ ರಾಜಕಾರಣಿ. ಸರ್ಕಾರ ಯಾವುದೇ ಇರಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಿಯಾಗಲ್ಲ. ಎಲ್ಲರೂ ಜಾತಿ-ಪಕ್ಷಭೇದ ಮರೆತು ಈ ಬಾರಿ ರಾಜಣ್ಣನವರ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. 



ಕಾರ್ಯಕ್ರಮದಲ್ಲಿ ಜೆಡಿಎಸ್ ತೊರೆದ ಗ್ರಾ.ಪಂ. ಸದಸ್ಯರಾದ ಗೋವಿಂದರಾಜು, ಹನುಮಪ್ಪರಾಜು, ಮುಖಂಡ ದೊಡ್ಡನರಸಪ್ಪ ಸೇರಿದಂತೆ 15 ಯುವಕರು ಕಾಂಗ್ರೆಸ್‍ಗೆ ಸೇರ್ಪಡೆಯಾದರು. 



ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಅಧ್ಯಕ್ಷೆ ಇಂದಿರಾ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಾಪುರ ರಂಗಶಾಮಯ್ಯ, ಬ್ರಹ್ಮಸಮುದ್ರ ಗ್ರಾ.ಪಂ. ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ದೇವರಾಜು, ಸ್ಥಳೀಯ ಗ್ರಾ.ಪಂ. ಸದಸ್ಯರಾದ ಗೋವಿಂದರಾಜು, ಹನುಮಪ್ಪ ರಾಜು, ಶಂಕರ್ ಯಾದವ್, ಮುಖಂಡರಾದ ದೊಡ್ಡನರಸಪ್ಪ, ನೀಲಿಹಳ್ಳಿ ಶ್ರೀನಿವಾಸ್, ವೆಂಕಟರಮಣಪ್ಪ, ಮಲ್ಲೇಗೌಡ, ಚಿತ್ತಯ್ಯ, ಕಾಂಗ್ರೆಸ್ ಕಾರ್ಯರ್ತರು ಇದ್ದರು.


ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು