ಮಧುಗಿರಿ : ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿದ್ದು, ಇಂದು ದೊಡ್ಡೇರಿ ಹೋಬಳಿಯ ಹಲವು ಗ್ರಾಮಗಳ ರಸ್ತೆ ಅಭಿವೃದ್ಧಿಗೆ 2.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ದೊಡ್ಡೇರಿ ಹೋಬಳಿಯ ಹೆಚ್.ಆರ್.ಪಾಳ್ಯ, ಗೂಬಲಗುಟ್ಟೆ, ಸೀಬಿನಯ್ಯನಪಾಳ್ಯ, ಜಾಲಿಹಳ್ಳಿ, ಬಡವನಹಳ್ಳಿ, ಕುರುಬರಹಳ್ಳಿ, ಹಾಗೂ ಬೂತನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಕೆ.ಟಿ.ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಹಾಗೂ ನೂತನ ಶಾಲಾ ಕಟ್ಟಡ ಕಾಮಗಾರಿಯ ಒಟ್ಟು 2.5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬೇಕಿದ್ದು ಮತ್ತಷ್ಟು ಅನುದಾನ ಬೇಕಿದೆ. ಈಗಾಗಲೇ ನೂರಾರು ಕೋಟಿ ಅನುದಾನವನ್ನು ಎಲ್ಲ ಹೋಬಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕೆಲವು ಕಡೆ ಕಾಮಗಾರಿ ನಡೆಯುತ್ತಿದ್ದು ಇಂದಿನ ಈ 2.5 ಕೋಟಿ ವೆಚ್ಚದ ಕಾಮಗಾರಿ ಶೀಘ್ರವಾಗಿ ಮುಗಿಯಲಿದೆ. ಉಳಿದಂತೆ ಯಾವುದೇ ಸಮಸ್ಯೆಯಿದ್ದರೂ ಆದಷ್ಟೂ ಬೇಗ ಕ್ರಮವಹಿಸಿ ಕಾಮಗಾರಿ ಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕ್ಷೇತ್ರದ ಗ್ರಾಮೀಣ ರಸ್ತೆಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದ್ದೆ. ಆದರೆ ಕುಮಾರಸ್ವಾಮಿ ಸರ್ಕಾರ ಕೊಟ್ಟ ಅನುದಾನದಂತೆ ಈಗಿನ ಸರ್ಕಾರ ಹಣಕಾಸಿನ ನೆರವು ನೀಡದ ಕಾರಣ ಕೆಲವು ರಸ್ತೆಗಳ ಅಭಿವೃದ್ಧಿಯಾಗಿಲ್ಲ. ಮುಂದೆ ಕುಮಾರಸ್ವಾಮಿ ಸರ್ಕಾರ ಬರಲಿದ್ದು ಮಧುಗಿರಿಯನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡುತ್ತೇನೆ.- ಎಂ.ವಿ.ವೀರಭದ್ರಯ್ಯ, ಶಾಸಕರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ತಾ.ಪಂ. ಮಾಜಿ ಸದಸ್ಯ ಮಂಜುನಾಥ್, ಹೋಬಳಿಯ ಮುಖಂಡರಾದ ಬಾವಿಮನೆ ಕಾಂತಣ್ಣ, ಹಂಸರಾಜ್, ವಿಶ್ವನಾಥಪ್ಪ, ರವಿ, ಸುರೇಶ್, ಕಬಾಲಿ ರಾಜು, ಸಣ್ಣಕಾಮಯ್ಯ, ರಾಜಣ್ಣ, ಪಿಡಿಓ ಅಲ್ಮಾಸ್, ರಂಗನಾಥ್, ಹಾಗೂ ಇತರರು ಜೊತೆಗಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
