ಮಧುಗಿರಿ : ಅತಿ ಹೆಚ್ಚು ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋದ ಸೇತುವೆಯಿಂದಾಗಿ ಗ್ರಾಮದ ಸಂಪರ್ಕ ಕಡಿದು ಹೋಗಿದ್ದು 1 ಕೋಟಿ ವೆಚ್ಚದಲ್ಲಿ ಆ ಸೇತುವೆ ನಿರ್ಮಾಣ ಚಾಲನೆ ನೀಡಿದ್ದೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ನೀರಕಲ್ಲು ಗ್ರಾಮದಲ್ಲಿ 13 ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ 1 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿ ಎಲ್ಲ ಕಡೆ ಸಿಸಿ ರಸ್ತೆ ನಿರ್ಮಿಸಿದ್ದು, ಅಂಗನವಾಡಿ ಕಟ್ಟಡ, ವಾಲ್ಮೀಕಿ ಭವನ ಹಾಗೂ ಇತರೆ ಕಾಮಗಾರಿಗಳು ಮಾಡಿದ್ದು ಮತ್ತೆ 1.2 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ. ಮಳೆಗಾಲ ಬೇಗ ಆರಂಭವಾಗುವ ಮುನ್ಸೂಚನೆಯಿದ್ದು ಸೇತುವೆ ನಿರ್ಮಾಣ ಕಾಮಗಾರಿ ಆದಷ್ಟೂ ಬೇಗ ಮುಗಿಯಬೇಕು ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ 2018 ರ ಚುನಾವಣೆಯಲ್ಲಿ ಈ ಗ್ರಾಮಸ್ಥರು ಪ್ರೀತಿಯಿಂದ ನನಗೆ ಹೆಚ್ಚಿನ ಮತ ಹಾಕಿದ್ದು ನಾನು ಮರೆತಿಲ್ಲ. ಸರ್ಕಾರವಿಲ್ಲದಿದ್ದರೂ ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದ್ದೇನೆ. ಗ್ರಾಮ ದೇವತೆ ದೇಗುಲಕ್ಕೆ ಈಗ ಅನುದಾನ ಕೇಳುತ್ತಿದ್ದು ಶಾಸಕರ ಅನುದಾನ ನಿಂತಿದೆ. ಆದರೆ ಜವಾಬ್ದಾರಿಯಿಂದ ನಾನು ದೇಗುಲದ ಅಭಿವೃದ್ಧಿಗೆ ವೈಯಕ್ತಿಕ ಸಹಕಾರ ನೀಡುತ್ತೇನೆ. ಮುಂದೆ ನಿಮ್ಮೆಲ್ಲರ ಆಶೀರ್ವಾದ ಸಂಪೂರ್ಣ ನೀಡಿದರೆ ಗೆದ್ದು ಬಂದು ದೇಗುಲದ ಸಂಪೂರ್ಣ ಅಭಿವೃದ್ಧಿಯನ್ನು ನಾನು ವಹಿಸಿಕೊಂಡು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
*ಬಾಕ್ಸ್ :*
*ಬಿಜೆಪಿ ತಾರತಮ್ಯದ ಸರ್ಕಾರ :*
ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದ್ದು. ಕ್ಷೇತ್ರಕ್ಕೆ ಕುಮಾರಸ್ವಾಮಿ ನೀಡಿದ ಎಲ್ಲ ಅನುದಾನವನ್ನು ಹಿಂಪಡೆಯಿತು. ಇದರಿಂದ ಮಧುಗಿರಿ ಅಭಿವೃದ್ಧಿಗೆ ಹೊಡೆತ ಬಿತ್ತು. ಮುಂದೆ ಕುಮಾರಸ್ವಾಮಿ ಸಿಎಂ ಆಗಲಿದ್ದು ಮಧುಗಿರಿ ಜಿಲ್ಲೆಯಾಗುವುದು ಖಚಿತ *.- ಎಂ.ವಿ.ವೀರಭದ್ರಯ್ಯ* .
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಮಹಿಳಾಧ್ಯಕ್ಷೆ ಸಿದ್ದಗಂಗಮ್ಮ, ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ವನಜಾಕ್ಷಿ ದಾಸೇಗೌಡ, ಚಿನ್ನೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಸದಸ್ಯ ನಾಗೇಂದ್ರ, ಎಇಇ ರಾಜಗೋಪಾಲ್, ಮುಖಂಡರಾದ.ರಾಮಚಂದ್ರಪ್ಪ, ವೀರಣ್ಣಗೌಡ, ಹನುಮಂತರಾಯಪ್ಪ, ಪ್ರಕಾಶ್, ನರಸಪ್ಪ, ಕರೇ ಹನುಮಯ್ಯ, ಹಾಗೂ ಇತರರು ಇದ್ದರು.
ವರದಿ ಮಧುಗಿರಿ ಬಾಲು ಪಣೀಂದ್ರ.
.
