ಅವರವರ ಕಾಯಕ ಅವರಿಗೆ ಶ್ರೇಷ್ಠ. :-- ಸಚಿವ.ಜೆ. ಸಿ. ಎಂ.

 ಚಿಕ್ಕನಾಯಕನಹಳ್ಳಿ : ಕೀಳರಿಮೆ ಬೆಳೆಸಿಕೊಂಡು ಹೋದರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಯಾವ ಕಸುಬು ಕೂಡ ಕೀಳಲ್ಲ. ನಮ್ಮ ಮೂಲ ಕಸುಬು, ಕೌಶಲ, ಕಲಾ ಪ್ರಕಾರಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಇನ್ನೊಬ್ಬರ ಬಗ್ಗೆ ನಿಂಧನೆ ಮಾತುಗಳನ್ನಾಡುವವರಿಗೇ ನಾಚಿಕೆಯಾಗಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.



 ಪಟ್ಟಣದ ಬಾಬು ಜಗಜೀವನ ರಾಮ್ ನಗರದಲ್ಲಿ ತಾಲೂಕು ಆಡಳಿತದ ಸಹಯೋಗದೊಂದಿಗೆ ಪಟ್ಟಣದ ನವೀಕೃತ ಶ್ರೀ ತ್ಯಾಗರಾಜಸ್ವಾಮಿ ಮಂದಿರದ ಪ್ರಾರಂಭೋತ್ಸವ, ಶ್ರೀ ಸವಿತಾ ಮಹರ್ಷಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುವುದು ನಮ್ಮ ಕರ್ತವ್ಯವಾಗಿದೆ. ಮುಖಂಡರು ತಮ್ಮ ಸಮುದಾಯದ ಸಾಮಾನ್ಯ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮಿಂದ ಕೆಲಸಗಳನ್ನು ಕೇಳಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. 


ಸವಿತಾ ಸಮಾಜದ ಸಮುದಾಯ ಭವನ ದುರಸ್ತಿಗೆ ಪ್ರಯತ್ನಿಸಲಾಗುವುದು. ಬಗರ್ ಹುಕುಂ, ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.


ಸಮುದಾಯದ ಮುಖಂಡ, ನಟ,ಮುತ್ತುರಾಜ್ ಮಾತನಾಡಿ, ಸವಿತಾ ಸಮಾಜ 2ಎ ಮೀಸಲಿನ ಪಟ್ಟಿಯಲ್ಲಿದ್ದು, ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಪ್ರವರ್ಗ 1 ಎ ಮೀಸಲಿಗೆ ಸೇರಿಸಬೇಕು. ನಮ್ಮ ಸಮುದಾಯದವರ ವಿರುದ್ಧ ಕೀಳು ಪದಗಳನ್ನು ಬಳಸುವವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತಹ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


ಸವಿತಾ ಸಮಾಜದ ತಾ ಅಧ್ಯಕ್ಷ ಶಿವಣ್ಣ ಮಾತನಾಡಿ, ಸಮುದಾಯ ಭವನ ಶಿಥಿಗೊಂಡಿದ್ದು, ದುರಸ್ತಿ, ಕೊಠಡಿ, ಶೌಚಗೃಹ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


ತಾಲೂಕಿನ ಹಿರಿಯ ಕಲಾವಿದರು, ಕ್ಷೌರಿಕ ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಪುರಸ್ಕರಿಸಲಾಯಿತು. 


ಈ ವೇಳೆ ತಹಸೀಲ್ದಾರ್ ಅರ್ಚನಾ ಭಟ್, ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್, ಮುಖಂಡ ಸುಪ್ರೀಂ ಸುಬ್ರಹ್ಮಣ್ಯ, ಸಮುದಾಯದ ಜಿಲ್ಲಾಧ್ಯಕ್ಷ ಮಂಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ಮುಖಂಡರಾದ ಕೆ.ವಿ. ನಾರಾಯಣಸ್ವಾಮಿ, ಹರೀಶ್, ಉಮೇಶ್, ಒ.ಕೆ. ರಾಜು, ರಂಗನಾಥ್, ಸುರೇಶ್, ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಆಧ್ಯಕ್ಷೆ ಪ್ರೇಮಾ ಇತರರಿದ್ದರು.



ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು