ಮಧುಗಿರಿ : ಕ್ಷೇತ್ರದಲ್ಲಿ ಸತತ 2 ದಶಕಗಳ ನಂತರ ಅಕ್ರಮವಾಗಿ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೆ ಕಾನೂನುಬದ್ಧ ರೀತಿಯಲ್ಲಿ ಸಾಗುವಳಿ ಚೀಟಿ ನೀಡಿದ ಶಾಸಕ ಎಂ.ವಿ.ವೀರಭದ್ರಯ್ಯನವರು ರೈತರ ಬದುಕು ಬಂಗಾರವಾಗಲಿ ಎಂದು ಶುಭ ಕೋರಿದರು.
ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ತಾಲೂಕು ಆಡಳಿತ ಹಾಗೂ ಬಗರ್ ಹುಕುಂ ಸಕ್ರಮೀಕರಣ ಸಮಿತಿಯಿಂದ ನಡೆದ ಸಾಗುವಳಿ ಚೀಟಿ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬೇಸಾಯವನ್ನು ನಂಬಿದ ರೈತರಿಗೆ ಅವರ ಭೂಮಿಯ ಹಕ್ಕನ್ನು ನೀಡಿದರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಈ ನೆಮ್ಮದಿಯ ಬದುಕನ್ನು ನೀಡಲು ದೇವರು ನನಗೆ ಶಕ್ತಿ ನೀಡಿದ್ದು ಈ ಕಾರ್ಯ ನನಗೆ ಹೆಮ್ಮೆ ಹಾಗೂ ತೃಪ್ತಿ ತಂದಿದೆ. ಮುಂದೆ 15 ದಿನಗಳಿಗೊಮ್ಮೆ ಸಭೆ ನಡೆಸಿ ಉಳಿದ ಅರ್ಜಿಗಳನ್ನು ಕಾನೂನು ರೀತಿಯಲ್ಲಿ ಇತ್ಯರ್ಥಪಡಿಸಲು ಮುಂದಾಗುತ್ತೇನೆ.
ರಾಜ್ಯ ಬಿಜೆಪಿ ಸರ್ಕಾರ ಬಡವರಿಗೆ ಭೂಮಿಯ ಹಕ್ಕು ನೀಡುವ ಈ ಸಮಿತಿ ರಚನೆಗೆ ಒಂದು ಹಂತದಲ್ಲಿ ಹಿಂದೇಟು ಹಾಕಿತ್ತು. ಸರ್ಕಾರಕ್ಕೆ ಈ ಸಮಿತಿ ರಚನೆ ಬೇಡವಾಗಿತ್ತು. ರಚನೆಗೆ ಒತ್ತಾಯ ಮಾಡಿದ್ದ ಕಾರಣ ಅಸಹನೆಯಿಂದಲೇ ಸಮಿತಿ ರಚನೆಗೆ ಮುಂದಾಗಿದ್ದು ಕಂದಾಯ ಸಚಿವರಿಗೆ ಮನವರಿಕೆ ಮಾಡಿ ರಚನೆಗೆ ಆದೇಶ ಮಾಡಿಸಿಕೊಂಡೆ. ತಹಶೀಲ್ದಾರ್ ಹಾಗೂ ಸಮಿತಿಯ ಎಲ್ಲ ಸದಸ್ಯರು ಕೂಡ ಅಧ್ಯಕ್ಷನಾದ ನನಗೆ ಸಂಪೂರ್ಣ ಸಹಕಾರ ನೀಡಿದ ಕಾರಣ ಇಂದು 87 ರೈತರಿಗೆ ಸಾಗುವಳಿ ಚೀಟಿ ಆದೇಶ ಪತ್ರ ನೀಡಲು ಸಾಧ್ಯವಾಗಿದ್ದು, ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ರೈತರಿಗೆ ವಿತರಣೆ ಮಾಡಿದ್ದು ಇದಕ್ಕಾಗಿ ಅಧಿಕಾರಿಗಳ ತಂಡಕ್ಕೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರೈತರು ತಮ್ಮ ಭೂಮಿಯಲ್ಲಿ ಬಂಗಾರದಂತ ಬೆಳೆ ಬೆಳೆದು ನಿಮ್ಮ ಬದುಕು ಹಸನಾಗಲಿ. ನನ್ನ 5 ವರ್ಷದ ಸಾಧನೆಯನ್ನು ಒಂದು ಕೈಪಿಡಿಯನ್ನಾಗಿಸುತ್ತಿದ್ದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಹೊರತಂದು ಸಾಧನೆಯ ಪಟ್ಟಿ ಹಿಡಿದು ಜನರ ಬಳಿಗೆ ಹೋಗುತ್ತೇನೆ ಎಂದರು.
330 ಎಕರೆ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನ ಮಾಡಿದ್ದು ಭೂಮಿ ಪೂಜೆ ಮಾಡಲಾಗುತ್ತದೆ. ಎತ್ತಿನಹೊಳೆಗೆ ಸರ್ಕಾರದಿಂದ ಹೆಚ್ಚಿನ ಸಹಕಾರ ಸಿಗಲಿಲ್ಲ. ಹಾಗೂ ಮಧುಗಿರಿಯನ್ನು ಜಿಲ್ಲಾ ಕೇಂದ್ರವಾಗಿಸಲು ಮತ್ತೆ ಕುಮಾರಸ್ವಾಮಿಯೇ ಬರಬೇಕಿದ್ದು, ನಿಮ್ಮೆಲ್ಲರ ಆಶೀರ್ವಾದ ನಮಗಿರಲಿ.- *ಎಂ.ವಿ.ವೀರಭದ್ರಯ್ಯ, ಶಾಸಕರು.*
*ಮುಖ್ಯಾಂಶಗಳು*
1. 2 ದಶಕಗಳ ನಂತರ ಸಾಗುವಳಿ ಚೀಟಿ ವಿತರಣೆ.
2. 87 ರೈತರಿಗೆ ಸಾಗುವಳಿ ಪತ್ರ.
3. 200 ಎಕರೆ ಅಕ್ರಮ ಭೂಮಿ ಸಕ್ರಮ.
4. ಜಿಲ್ಲಾ ಕೇಂದ್ರಕ್ಕೆ ಹೆಚ್‍ಡಿಕೆ ಬರಬೇಕು.
5. ಕ್ಷೇತ್ರದ ಅಭಿವೃದ್ಧಿಯ ಕೈಪಿಡಿ ಜೊತೆ ಮತಯಾಚನೆ.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಸುರೇಶಾಚಾರ್ ಸಾಗುವಳಿ ಚೀಟಿ ಆದೇಶಪತ್ರ ನೀಡುವುದು ನಮಗೆ ಪುಣ್ಯದ ಕೆಲಸ. ಅದನ್ನು ನಾನು ನನ್ನ ತಂಡ ಶಾಸಕರ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇವೆ. ಈ ಭೂಮಿಯನ್ನು ನೀವೇ ಅನುಭವಿಸಬೇಕಿದ್ದು ನಿಯಮದ ಪಾಲನೆಯಂತೆ ನಡೆಯಿರಿ. ಕನಿಷ್ಟ 25 ವರ್ಷದವರೆಗೂ ಈ ಜಮೀನು ಮಾರಾಟ ಮಾಡುವಂತಿಲ್ಲ ಎಂದರು.
ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ 87 ರೈತರಿಗೆ ನೀಡಿದ ಸಾಗುವಳಿ ಚೀಟಿ ಮುಂದೆ 900 ರೈತರಿಗೆ ನೀಡುವ ಶಕ್ತಿ ಶಾಸಕರಾದ ವೀರಭದ್ರಯ್ಯನವರಿಗೆ ನಾವೆಲ್ಲ ನೀಡಬೇಕು. ಮುಂದೆ ಮಧುಗಿರಿ ಅಭಿವೃದ್ಧಿ ಜೆಡಿಎಸ್‍ನಿಂದ ಮಾತ್ರ ಸಾಧ್ಯ ಎಂದರು.
ಪುರಸಭೆ ಸದಸ್ಯರಾದ ಎಂ.ಆರ್.ಜಗಣ್ಣ, ಎಂ.ಎಲ್.ಗಂಗರಾಜು, ಹಿರಿಯ ಮುಖಂಡ ತುಂಗೋಟಿ ರಾಮಣ್ಣ ಮಾತನಾಡಿದರು. ಪುರಸಭೆ ಸದಸ್ಯ ಕೆ.ನಾರಾಯಣ್, ಮುಖಂಡರಾದ ಚಂದ್ರಗಿರಿ ರವಿ, ಚಿನ್ನು, ನೂರಾರು ಫಲಾನಭಿವಿ ರೈತರು ಹಾಗೂ ಇತರರು ಇದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
