ಗುಬ್ಬಿ: ಉತ್ತಮ ಅಂಕ ಪಡೆಯಬೇಕು ಎನ್ನುವ ಗುರಿ ಇದ್ದರೆ ಏಕಾಗ್ರತೆಯಿಂದ ಓದಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ತಿಳಿಸಿದರು.
ಪಟ್ಟಣದ ಶುಭೋದಯ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ನಾಟ್ಯ ಸಂಭ್ರಮ 2023 ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದಿನ ಭವಿಷ್ಯಕ್ಕೆ ತಳಪಾಯವಿದ್ದ ಹಾಗೆ, ಆದ್ದರಿಂದ ಶ್ರಮಪಟ್ಟು ನಿರಂತರ ಅಭ್ಯಾಸ ಮಾಡಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದರೆ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ . ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಬೇಕಾದರೆ ಎಷ್ಟು ಗಂಟೆಗಳ ಕಾಲ ಓದಬೇಕು ಎಂಬುದನ್ನು ಮನಗಂಡು ಮುಂದುವರಿಯಬೇಕು ಎಂದರು.
ಸಬ್ ಇನ್ಸ್ಪೆಕ್ಟರ್ ಮುತ್ತುರಾಜು ಮಾತನಾಡಿ ಸಾಧನೆ ಆದಿಯಲ್ಲಿ ಸಾಗಬೇಕಾದರೆ ಇಚ್ಛಾಶಕ್ತಿ ಮುಖ್ಯ. ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಶಾಲೆಗಳಲ್ಲಿ ಸಿಗುತ್ತಿದೆ. ಇದರ ಅವಕಾಶವನ್ನು ಪಡೆದುಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ಮುಖ್ಯ ಶಿಕ್ಷಕ ಸಿ.ರಾಜು ಮಾತನಾಡಿ ಗುಣಮಟ್ಟ ಶಿಕ್ಷಣ ಶುಭೋದಯ ಶಾಲೆಯಲ್ಲಿ ಸಿಗುತ್ತದೆ. ವಿದ್ಯಾಭ್ಯಾಸ ಇದ್ದರೆ ಉತ್ತಮ ಸಂಸ್ಕೃತಿ ಅಥವಾ ಉನ್ನತ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯ. ಈ ಶಾಲೆಯಲ್ಲಿ ಓದಿದಂತಹ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿದ್ದಾರೆ ಎಂಬುದಕ್ಕೆ ತುಂಬಾ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ವಿದ್ಯೆ ಕಲಿಯಲು ಉತ್ತಮ ವಾತಾವರಣ ಒದಗಿಸಿ ಕೊಡಬೇಕು ಎಂದರು.
ಪಪಂ ಸದಸ್ಯ ಜಿ.ಆರ್. ಶಿವಕುಮಾರ್ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರೆ ತರಲು ಶಾಲೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ರಾಜಶೇಖರ್.ಟಿ.ಎಲ್, ಪಟ್ಟಣ ಪಂಚಾಯಿತಿ ಸದಸ್ಯ ರಂಗಸ್ವಾಮಿ, ಜಿಪಂ ಸದಸ್ಯ ಗೂಳೂರು ಶಿವಕುಮಾರ್, ಆಡಳಿತ ಅಧಿಕಾರಿ ಅಮರ್, ಕಸಾಪ ಕೋಶಾಧ್ಯಕ್ಷ ಸುಬ್ರಹ್ಮಣ್ಯ, ಪ್ರಾಂಶುಪಾಲ ಗಂಗರಾಜು ಇತರರು ಇದ್ದರು.
ವರದಿ: ಮಂಜುನಾಥ್
