ಚಿಕ್ಕನಾಯಕನಹಳ್ಳಿ: ಪೂರ್ವಿಕರು ಸುಸ್ಥಿರ ಸದೃಢವಾಗಿ ಬದುಕಲು ಪ್ರಕೃತಿಯ ವ್ಯವಸ್ಥೆಯನ್ನು ಆಳುಗೆಡವದೆ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ ಎಂದು ಮೈಸೂರು ಮಹಾಸಂಸ್ಥಾನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ತಾಲೂಕಿನ ಹುಳಿಯಾರ್ ಕೆರೆ ಹಾಗೂ ಬೋರನಕಣಿವೆ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ಸ್ವತಂತ್ರ ಪೂರ್ವದಲ್ಲಿ ಮೈಸೂರು ಸಂಸ್ಥಾನವನ್ನು ಅನೇಕ ರಾಜರು ಆಳ್ವಿಕೆ ನಡೆಸಿದ್ದಾರೆ ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲವನ್ನು ವರ್ಣ ಯುಗವೆಂದು ಕರೆಯಬಹುದು. ಈ ಸುವರ್ಣ ಯುಗಕ್ಕೆ ಬೀಜನೆಟ್ಟಿದ್ದು 10ನೇ ಚಾಮರಾಜ ಒಡೆಯರು ಹಾಗೂ ದಿವಾನರಾದ ರಂಗಚಾರ್ಯ, ಶೇಷಾದ್ರಿ ಅಯ್ಯರ್ ಕಾಲದಲ್ಲಿ ನೀರಾವರಿ ಯೋಜನೆಗಳು ಜಾರಿಯಾಗಿವೆ ಎಂದು ಸ್ಮರಿಸಿದರು.ಹತ್ತನೇ ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿನ ನಿರ್ಮಾಣವಾದ ಬೋರನಕಣಿವೆ ಜಲಾಶಯ ನೋಡಲು ಸುಯೋಗ ಕೂಡಿಬಂದಿದೆ.
ನಮ್ಮ ಮಹಾರಾಜರುಗಳು ಪ್ರಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಇದಕ್ಕೆ ಈ ತಾಲೂಕಿನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಿರುವ ಬೋರನಕಣಿವೆ ಜಲಾಶಯ ಸಾಕ್ಷಿ.ಮೈಸೂರು ಮಹಾರಾಜರ ನೀರಾವರಿ ಯೋಜನೆಗಳನ್ನು ಓದಿದ್ದೆ ಕೇಳಿದ್ದೆ, ರಾಜರು ಕಟ್ಟಿದ ಜಲಾಶಯಗಳನ್ನು ಬಂದು ನೋಡಲು ಆಗಿರಲಿಲ್ಲ.
ಜೆಸಿಪುರದಿಂದ ಬೋರನಕಣಿವೆ ಜಲಾಶಯದವರೆಗೂ ಪ್ರಯಾಣ ಮಾಡಿದ ಅನುಭವ ಅತ್ಯದ್ಭುತವಾಗಿದೆ. ನಗರದಲ್ಲಿ ಇರುವವರಿಗೆ ಇಲ್ಲಿನ ಪರಿಸರ ಹಸಿರು ಪ್ರಕೃತಿಯ ಸೊಬಗು ಮನತಣಿಸುತ್ತದೆ. ಈ ಪರಿಸರವನ್ನು ಹೀಗೆ ಉಳಿಸಿ ಮುಂದಿನ ಪೀಳಿಗೆಗೆ ಕೊಡಬೇಕು.ಹತ್ತನೇ ಚಾಮರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಬೋರನಕಣಿವೆ ಜಲಾಶಯ ನೋಡುವ ಪುಣ್ಯ ನನ್ನದು.
ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ಮಾತನಾಡಿ ಮೈಸೂರು ಮಹಾರಾಜರ ಕಾಲದಲ್ಲಿ ರಾಜ್ಯದ ಉದ್ದಗಲಕ್ಕೂ ನೀರಾವರಿ ಯೋಜನೆ ರೂಪಿಸಿದ್ದಾರೆ.ನಮ್ಮ ಜಿಲ್ಲೆಯಲ್ಲಿ ಮಾರ್ಕೋನಹಳ್ಳಿ ಬೋರನಕಣಿವೆ ಜಲಾಶಯ ಸೇರಿದಂತೆ ಮಂಗಳ ಅಣೆಕಟ್ಟು ನಿರ್ಮಿಸಿದ್ದಾರೆ.ಮೈಸೂರು ಅರಸರಂತೆ ಜನ ಹಿತ ಕಾರ್ಯಕ್ರಮ ಇನ್ಯಾವ ಅರಸರು ಮಾಡಿಲ್ಲ. ಹಾಗಾಗಿ ರಾಜ್ಯದ ಜನ ಮೈಸೂರು ಅರಸರನ್ನ ಸದಾ ಕಾಲ ಸ್ಮರಿಸಬೇಕು .ಹಿಂದಿನ ಅನೇಕ ರಾಜರು ಶೋಷಣೆ ಮಾಡುತ್ತಿದ್ದರು ಪ್ರಜಾಪ್ರಭುತ್ವ ವ್ಯವಸ್ಥೆ ಬರದಿದ್ದರೆ ಒಬ್ಬರಿಗೊಂದು ನ್ಯಾಯ ಇರುತ್ತಿತ್ತು. ಹಿಂದೆ ರಾಜರ ವ್ಯವಸ್ಥೆಗಳನ್ನು ಟೀಕೆ ಮಾಡಿಕೊಂಡು ಬಂದಿದ್ದರು, ಆದರೆ ಯಾವುದೇ ಟೀಕೆ ಇಲ್ಲದೆ ಜನ ಹಿತ ಕಾಯುವ ಮೂಲಕ ಅನೇಕ ಅಭಿವೃದ್ಧಿ ಕೆಲಸ ಮಾಡಿದ ಕೊಲ್ಲಾಪುರ ಹಾಗೂ ಮೈಸೂರು ಅರಸರನ್ನು ಎಂದೂ ಮರೆಯಬಾರದು.
ಮೈಸೂರು ರಾಜರು ಪ್ರಜಾಪ್ರಭುತ್ವ ವ್ಯವಸ್ಥೆ ಬರುವ ಮೊದಲೇ ಜನಪ್ರತಿನಿಧಿಗಳ ಸಭೆ ಮಾಡಿದ್ದರು. ಮೀಸಲಾತಿ ಶಿಕ್ಷಣ ನೀರಾವರಿಯ ವ್ಯವಸ್ಥೆ ಅವರ ದೂರದೃಷ್ಟಿ ಗೆ ಸಾಕ್ಷಿಯಾಗಿವೆ.ಬೋರು ಕಣಿವೆ ಜಲಾಶಯದಿಂದ ಭದ್ರ ಯೋಜನೆಯಿಂದ 1.5 ಟಿಎಂಸಿ ನೀರು ತರುತ್ತಿದ್ದೇವೆ, ಎಪ್ಪತ್ತು ಕೋಟಿ ರೂ ವೆಚ್ಚದಲ್ಲಿ ಗಂಟೆನಹಳ್ಳಿ ಕೆರೆಯಿಂದ ಬೋರನಕಣಿವೆ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಮಾಡಲಿದ್ದೇನೆ. ಅಲ್ಲದೆ ಇಲ್ಲಿಂದ 117 ಕೋಟಿ ವೆಚ್ಚದಲ್ಲಿ 5 ಗ್ರಾಮ ಪಂಚಾಯಿತಿಗಳ ಜನರಿಗೆ ಶುದ್ಧೀಕರಿಸಿದ ನೀರನ್ನು ಕೊಡುತ್ತೇವೆ. ಮುಂದಿನ ವಾರ ಈ ಯೋಜನೆ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿದ್ದೇನೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಮೀಸಲಾತಿಯಲ್ಲಿ ಅರಸರ ಕಾಲಕ್ಕೆ ಹಿಂದೆ ಇರುತ್ತಿದ್ದೇವೆ. ಹಿಂದುಳಿದ ಜನರು ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಅವಕಾಶ ಸಿಕ್ಕಿ ಮುಂದೆ ಬರುವ ಸಲುವಾಗಿ ಮೈಸೂರು ಅರಸರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲೇ ಹಿಂದುಳಿದ ವರ್ಗದವರಿಗೆ ಶೇಕಡ 75 ಮೀಸಲಾತಿ ಕೊಟ್ಟು ರಾಷ್ಟ್ರಕ್ಕೆ ಮಾದರಿಯಾಗಿದ್ದರು.
ಈಗ ನಾವು ಶೇಕಡ 66 ಕ್ಕೆ ಬಂದಿದ್ದೇವೆ ಇನ್ನೇನು ಶೀಘ್ರದಲ್ಲಿ ಮೀಸಲಾತಿಯಲ್ಲಿ ಅರಸರ ಕಾಲಕ್ಕೆ ಹಿಂದಿರುಗಲಿದ್ದೇವೆ ಮೈಸೂರು ಪ್ರಾಂತ್ಯದಲ್ಲಿ ಮಠಗಳು ಹಾಗೂ ಮಹಾರಾಜರು ಶಿಕ್ಷಣಕ್ಕೆ ಒತ್ತು ನೀಡದಿದ್ದರೆ ಎಷ್ಟೊಂದು ಮಂದಿ ಉದ್ಯೋಗ ಉದ್ಯೋಗಸ್ಥರಾಗುತ್ತಿರಲಿಲ್ಲ. ಏಕೆಂದರೆ ಉತ್ತರ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹಿಂದೆ ಹೊತ್ತು ನೀಡದಿದ್ದರಿಂದ ಸರ್ಕಾರ ಉದ್ಯೋಗಕ್ಕಾಗಿ ಪರಿಕ್ಷೆ ನಡೆಸಿದಾಗ ಅರ್ಹರಾಗುವಷ್ಟು ಅಂಕ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಮರಳುಗಾಡು ಆಗುವುದನ್ನು ತಪ್ಪಿಸಿದ್ದಾರೆ..
ಚಿಕ್ಕನಾಯಕನಹಳ್ಳಿ ತಾಲೂಕಿನ ಒಂದು ಹನಿ ನೀರು ಹೊರಹೊಗದಂತೆ ಮಾಡಿದ ಮೈಸೂರು ಅರಸರ ಮುಂದಾಲೋಚನೆ ಈ ತಾಲೂಕನ್ನು ಮರಳುಗಾಡಾಗುವುದನ್ನು ತಪ್ಪಿಸಿದ್ದಾರೆ.
ಬೋರನಕಣಿವೆ ಜಲಾಶಯಕ್ಕೆ ಸುಮಾರು 80 ಕಿಲೋಮೀಟರ್ ನಿಂದ ಕೆರೆಗಳು ಕೋಡಿಬಿದ್ದು ನೀರು ಜಲಾಶಯ ಸೇರುತ್ತದೆ. ಅಷ್ಟರಮಟ್ಟಿಗೆ ಜೆಸಿಪುರ ಕೆರೆಯಿಂದ ಆರಂಭವಾದ ಬೋರನಕಣಿವೆ ಜಲಾಶಯದವರಿಗೂ ಎಲ್ಲೂ ಅಡಚಣೆ ಇಲ್ಲದಂತೆ ಕರಾಬು ತೆಗೆದು ಸರದವಾಗಿ ನೀರು ಹರಿಯುವಂತೆ ಮಾಡಿದ್ದಾರೆ. ಈ ಜಲಾಶಯ ತುಂಬಿದರೆ ಗಾಯತ್ರಿ ಜಲಾಶಯಕ್ಕೆ ನೀರು ಹೋಗುತ್ತದೆ. ಈ ರೀತಿ ಆಲೋಚನೆಗಳು ಮಹಾರಾಜರು ಹಾಗೂ ಅಂದಿನ ದಿವಾನರು ಆಲೋಚನೆ ನಿಜಕ್ಕೂ ಆಶ್ಚರ್ಯ ಎಂದರು.
ಕಾರ್ಯಕ್ರಮದಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಮ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಎಂಎಲ್ ಕಿರಣ್ ಕುಮಾರ್, ಹೊಯ್ಸಳ ಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಗೀತಾ ಅಜ್ಜಪ್ಪ, ಕೆಸಿ ವಿಕಾಸ್, ಚೇತನ್, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಶೃತಿ ಸನತ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಬಗರು ಹುಕುಂ ಸಮಿತಿ ಸದಸ್ಯ ನಿರಂಜನ್ ಮೂರ್ತಿ, ಕೇಶವಮೂರ್ತಿ, ವಸಂತಯ್ಯ, ರಘುವೀರ್, ಮಲ್ಲಿಕಾರ್ಜುನ್ ಸ್ವಾಮಿ ಸಿ, ಎಚ್ಎಸ್ ಪ್ರಕಾಶ್, ಕಮಲಮ್ಮ, ಬೆಳ್ಳಾರ ಮಂಜುನಾಥ್, ದಯಾನಂದ್ ಸಾಗರ್ ಸೇರಿದಂತೆ ಈ ಭಾಗದ ಎಲ್ಲಾ ನಾಗರಿಕರು ಭಾಗವಹಿಸಿದ್ದರು.
ವರದಿ: ಚಿಕ್ಕನಾಯಕನಹಳ್ಳಿ ಚಂದ್ರು.
