ಚಿಕ್ಕನಾಯಕನಹಳ್ಳಿ : ಹಲವು ವರ್ಷಗಳ ಕಾಲ ಸಚಿವರಿಗೆ ಬಲಗೈ ನಂತಿದ್ದೆ, ಅವರನ್ನು ಅಧಿಕಾರಕ್ಕೆ ತರಲು ಸಾಕಷ್ಠು ಶ್ರಮಿಸಿದೆ, ಅಧಿಕಾರ ಬಂದ ನಂತರ ಸಚಿವರಿಗೆ ನನ್ನ ಅವಶ್ಯಕತೆ ಇಲ್ಲವಾಯಿತು ಹಾಗಾಗಿ ಅಂತರ ಕಾಯ್ದುಕೊಂಡಿದ್ದೆ ಪುನಃ ನನ್ನ ನಂಬಿದ ಜನರಿಗಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ, ಮುಂದೆ ಮತದಾರರಲ್ಲಿ ಜೆಡಿಎಸ್ ಪಕ್ಷಕ್ಕಾಗಿ ಮತಭಿಕ್ಷೆ ಕೇಳುತ್ತೇನೆ ಎಂದು ಮಾಜಿ ತಾ.ಪಂ.ಅಧ್ಯಕ್ಷ ಹೊನ್ನೆಬಾಗಿ ಶಶಿಧರ್ ಹೇಳಿದರು.
ತಾಲ್ಲೂಕಿನ ಗೋಡೆಕೆರೆ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತನ್ನ ನೂರಾರು ಬೆಂಬಲಿಗರ ಜೊತೆ ಬಿಜೆಪಿ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಚಿವರ ಅಧಿಕಾರಕ್ಕಾಗಿ ದುಡಿದೆ, ಸಚಿವರಿಗೆ ಅಧಿಕಾರ ಬಂದ ನಂತರ ನನ್ನ ಅವಶ್ಯಕತೆ ಅವರಿಗಿಲ್ಲದಾಯಿತು, ಹಾಗಾಗಿ ನನ್ನ ಅವಶ್ಯಕತೆ ಇರುವವರಿಗೆ ನಾನು ನನ್ನ ಬೆಂಬಲ ನೀಡುತ್ತೇನೆ, ಎಂದರು.
ರಾಜಕೀಯದಲ್ಲೇ ಜೀವನ ಮಾಡಬೇಕೆಂದು ಬಂದವನಲ್ಲ, ಯಾರೇ ಆಗಲಿ ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ನಾನೂ ಅವರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತೇನೆ, ಇಷ್ಟು ದಿನಗಳ ಕಾಲ ರಾಜಕೀಯವೇ ಬೇಡವೆಂದು ಸುಮ್ಮನಾಗಿದ್ದೆ ಕಾರ್ಯಕರ್ತರ ಒತ್ತಾಯದ ಮೇರೆಗೆ ಮತ್ತೆ ರಾಜಕೀಯದ ಒಲವು ತೋರಿಸುತ್ತಿದ್ದೇನೆ ಎಂದರಲ್ಲದೆ, ತಳಮಟ್ಟದಿಂದ ಬಂದಂತ ಕಾರ್ಯಕರ್ತ, ಪಂಚಾಯ್ತಿ ಸದಸ್ಯನಾಗಿ, ತಾ.ಪಂ.ಅಧ್ಯಕ್ಷನಾಗಿ ದುಡಿದು ರಾಜಕೀಯ ಮಾಡಿದವನು, ಮುಂದೆ ನಮ್ಮ ಸಹಕಾರ, ತಂತ್ರವನ್ನು ಮತ್ತೊಮ್ಮೆ ಅಧಿಕಾರ ಬರಲು ಶ್ರಮಿಸುತ್ತೇನೆ ಎಂದರು.
ಅಧಿಕಾರಕ್ಕೆ ಬರುವ ಮುನ್ನ ಸಚಿವರು ಒಂದು ಕೆಲಸ ಹೇಳಿದರೆ ನಾಲ್ಕು ಕೆಲಸ ಮಾಡುತ್ತಿದ್ದವನು ನಾನು, ನನ್ನ ಕೆಲಸ ನೋಡಿ ಹಲವರು ನಮ್ಮ ಪರವಾಗಿ ಬರುವಂತೆ ಹೇಳಿದರೂ ನಾನೂ ಒಮ್ಮತವಾಗಿ ಒಬ್ಬರ ಜೊತೆಯಲ್ಲೇ ಹಲವಾರು ವರ್ಷಗಳ ಕಾಲ ದುಡಿದೆ, ಯಾವ ಪ್ರತಿಫಲಾಕ್ಷೇ ಬಯಸದೇ ಎಂದರು.
ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಘೋಷಿಸಿರುವ ಯೋಜನೆಗಳು ರೂಪುಗೊಳ್ಳಲಿವೆ ಎಂದರಲ್ಲದೆ, ಶಶಿಧರ್ ರವರು ಜೆಡಿಎಸ್ ಪಕ್ಷಕ್ಕೆ ಬಂದಿರುವುದರಿಂದ ನಮ್ಮ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ, ನಾವೆಲ್ಲರೂ ಒಟ್ಟಾಗಿ ಜೊತೆಯಾಗಿ ಇರುತ್ತೇವೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, ಚಿ.ನಾ.ಹಳ್ಳಿ ರಾಜಕೀಯ ಚಿತ್ರಣ ಬದಲಾಗಿದೆ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಶಕ್ತಿಯಿದೆ, ಪಕ್ಷವೂ, ಸುರೇಶ್ ಬಾಬುರವರ ಬಲವೂ ಹೆಚ್ಚು ಬಲಗೊಳ್ಳುತ್ತಿದೆ, ಅಧಿಕಾರಕ್ಕೆ ಬರುವುದಂತು ನಿಶ್ಚಿತ ಎಂದರು.
ಮಾಜಿ ಜಿ.ಪಂ.ಸದಸ್ಯ ಕಲ್ಲೇಶ್ ಮಾತನಾಡಿ, ಹೊನ್ನೆಬಾಗಿ ಶಶಿಧರ್ ರವರು ಜೆಡಿಎಸ್ ಪಕ್ಷಕ್ಕೆ ಬಂದಿರುವುದರಿಂದ ಅವರ ಕಾರ್ಯಕರ್ತರು ಮತ್ತು ನಮ್ಮ ಕಾರ್ಯಕರ್ತರು ನಾವುಗಳು ಸಹ ಜೊತೆಯಾಗಿ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ಮುಖಂಡರುಗಳಾದ ಮೋಹನ್, ಅಜಿತ್ ಕೊಡಲಾಗರ, ಎಂ.ಬಿ.ನಾಗರಾಜು, ಸಿ.ಬಿ.ರೇಣುಕಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೋತ ಸಮಯದಲ್ಲಿ ಯಾವಾಗಲು ಸಚಿವರ ಜೊತೆಯಲ್ಲೇ ಇರುತ್ತಿದ್ದ ನಾನು, ಅವರು ಅಧಿಕಾರಕ್ಕೆ ಬಂದ ನಂತರ ಸೌಜನ್ಯಕ್ಕಾದರೂ ನಮ್ಮನ್ನು ಸಂಪರ್ಕಿಸಲಿಲ್ಲ, ಒಮ್ಮೆಯಾದರೂ ನನ್ನನ್ನು ಕರೆದಿದ್ದರೆ ನಾನು ಸಚಿವರ ಜೊತೆ ಇರುತ್ತಿದ್ದೆನೆನೋ ಆದರೆ ಅವರಿಗೆ ನಮ್ಮ ಅವಶ್ಯಕತೆ ಇರಲಿಲ್ಲ, ಅವರ ವರ್ತನೆ ಸರಿ ಕಾಣಲಿಲ್ಲ ಹಾಗಾಗಿ ನಾನು ಬದಲಾದೆ.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು
