ಮಧುಗಿರಿ : ಸಂವಿಧಾನದ ಪ್ರಜಾ-ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು ಅವರ ಸೇವೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜೆಗಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡಬೇಕು. ಕನಿಷ್ಟ ಮಾಶಾಸನ, ಖಾತೆ ಬದಲಾವಣೆ, ರಸ್ತೆ, ಸಾರಿಗೆ, ಬೀದಿ ದೀಪ, ಶುದ್ಧ ಕುಡಿಯುವ ನೀರು, ಮನೆ, ನಿವೇಶನ ಹಾಗೂ ಸ್ಮಶಾನದಂತಹ ಸೌಲಭ್ಯಗಳನ್ನು ಜನತೆ ಸರ್ಕಾರದ ಮುಂದಿಡುತ್ತಾರೆ. ಅವುಗಳನ್ನು ಅನುಷ್ಟಾನಕ್ಕೆ ತರುವುದು ತಾಲೂಕು ಆಡಳಿತದ ಕರ್ತವ್ಯ. ಇದನ್ನು ಅ„ಕಾರಿಗಳು ಪ್ರಾಮಾಣಿಕವಾಗಿ ನಡೆಸಿಕೊಡಬೇಕು ಎಂದರು.
ತಹಶೀಲ್ದಾರ್ ಸುರೇಶಾಚಾರ್ ಮಾತನಾಡಿ, ವಿವಿಧ ಮಾಶಾಸನಗಳ ಪೈಕಿ 54 ಅರ್ಜಿಗಳು ಬಂದಿದ್ದು, ಇದರಲ್ಲಿ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಹೆಚ್ಚು ಸಂಬಂಧಿಸಿದ್ದು, ಸಾರಿಗೆ, ವಿದ್ಯುತ್ ಇಲಾಖೆಗಳ ಜೊತೆಗೆ ಬಗರ್ ಹುಕುಂ, ಖಾತೆ ಬದಲಾವಣೆ ಬಗ್ಗೆ ಅರ್ಜಿ ಬಂದಿದ್ದು 25 ಮಾಶಾಸನದ ಆದೇಶ ಪತ್ರ ನೀಡಿದ್ದೇವೆ. ವಿವಿಧ ಇಲಾಖೆಯಿಂದ ನೀಡಬಹುದಾದ ಹಲವಾರು ಮಾಹಿತಿಯನ್ನು ಗ್ರಾಮಸ್ಥರೊಂದಿಗೆ ಹಂಚಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಮಾತಿಗಿಲ್ಲ ಕಿಮ್ಮತ್ತು : ಕಳೆದ ತಿಂಗಳು ತಾಲೂಕಿನ ಗಿಡದಾಗಲಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಕಾರ್ಯಕ್ರಮದಲ್ಲಿ ಬೆಳಿಗ್ಗೆ 7 ಗಂಟೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತುಮಕೂರಿಗೆ ಸಾರಿಗೆ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಈ ಸಮಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಇಲಾಖೆ ಮಾಡಿಲ್ಲ ಎಂಬ ಆರೋಪ ಈ ಕಾರ್ಯಕ್ರಮದಲ್ಲೂ ಕೇಳಿಬಂದಿತು. ಇದರಿಂದ ಅಸಮಧಾನಗೊಂಡ ತಹಶೀಲ್ದಾರ್ ಸಭೆಗೆ ತಡವಾಗಿ ಆಗಮಿಸಿದ ಸಾರಿಗೆ ಅಧಿಕಾರಿಯನ್ನು ನಯವಾಗಿಯೇ ತರಾಟೆಗೆ ತಗೆದುಕೊಂಡರು. ಹಾಗೂ ಶೀಘ್ರ ಈ ಸಮಸ್ಯೆಯ ಜೊತೆಗೆ ಜನಕಲೋಟಿಗೆ ಬರುವ ಬಸ್ಸನ್ನು ತಿಪ್ಪಾಪುರ, ತಿಪ್ಪಾಪುರ ತಾಂಡ ಹಾಗೂ ಯಲ್ಕೂರಿನ ಮೂಲಕ ಮಧುಗಿರಿಗೆ ಸಂಚರಿಸಿದರೆ ಸುಮಾರು 55 ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೋರಾಟಗಾರ ಮೈಲಾರಪ್ಪ ಮನವಿ ಸಲ್ಲಿಸಿದರು. ತಕ್ಷಣ ಈ ಬಗ್ಗೆ ಕ್ರಮವಹಿಸಲು ತಹಶೀಲ್ದಾರ್
ಅಧಿಕಾರಿಗೆ ಸೂಚಿಸಿದರು.
ಕಟಾಚಾರದ ಕಾರ್ಯಕ್ರಮ ಎಂದ ಗ್ರಾ.ಪಂ. ಅಧ್ಯಕ್ಷ ಸದರಿ ಕಾರ್ಯಕ್ರಮದಲ್ಲಿ ಸಾರಿಗೆ, ಕೃಷಿ, ಇತರೆ ಇಲಾಖೆಗಳ ಅಧಿಕಾರಿಗಳು ಬಂದಿಲ್ಲ. ನಮ್ಮೂರಿನ ರಸ್ತೆ ಲೊಕೋಪಯೋಗಿ ಇಲಾಖೆಗೆ ಸೇರಿದ್ದು ಜಂಗಲ್ ಕಟಿಂಗ್ ಮಾಡದೆ ಅಪಘಾತಗಳು ನಡೆಯುತ್ತಿವೆ. ಕಾರ್ಯಕ್ರಮದ ನಿಮಿತ್ತ ಗ್ರಾ.ಪಂ.ನಿಂದಲೇ ಜಂಗಲ್ ಕಟಿಂಗ್ ಮಾಡಿಸಿದ್ದು ಯಾರಿಗೂ ಜವಾಬ್ದಾರಿಯಿಲ್ಲದಾಗಿದೆ. ಬರೀ ಮಾಶಾಸನ ನೀಡಲಷ್ಟೇ ಈ ಕಾರ್ಯಕ್ರಮ ಆಯೋಜನೆ ಮಾಡಿದಂತಿದೆ ಎಂದು ಗ್ರಾ.ಪಂ.
ಅಧ್ಯಕ್ಷ ಶಂಕರ್ ಪ್ರಜ್ವಲ್ ಆರೋಪಿಸಿದರು.
ಈ ವಿಚಾರವಾಗಿ ಯಾವುದೇ ಸಮಸ್ಯೆಯಿಲ್ಲ ಎಲ್ಲವೂ ಸರ್ಕಾರದ ನಿರ್ದೇಶನದಂತಯೇ ನಡೆಯುತ್ತಿದೆ ಎಂದು ತಹಶೀಲ್ದಾರ್ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ತಿಪ್ಪೇಸ್ವಾಮಿ, ಡಿಟಿ ಇನಾಯತ್, ಕಂದಾಯಾಧಿಕಾರಿ ನಾರಾಯಣಪ್ಪ, ವಿಎಗಳಾದ ರವಿಕುಮಾರ್, ಜಗದೀಶ್, ಕಿರಣ್, ತನುಜ, ಹಾಗೂ ಪಿಡಿಓ ನವೀನ್, ತಾಲೂಕು ಮಟ್ಟದ ಅ„ಕಾರಿಗಳು ಹಾಗೂ ಗ್ರಾಮಸ್ಥರು ಜೊತೆಗಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
