ಕೈಲಾಗದವರ ಕೊನೆಯ ಆಯುಧವೇ ಅಪಪ್ರಚಾರ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್ ಕಾಂಗ್ರೇಸ್ ಪಕ್ಷಕ್ಕೆ ಟಾಂಗ್

 ಮಧುಗಿರಿ - ಕೈಲಾಗದವರ ಕೊನೆಯ ಆಯುಧವೇ ಅಪಪ್ರಚಾರ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್ ಕಾಂಗ್ರೇಸ್ ಪಕ್ಷಕ್ಕೆ ಟಾಂಗ್ ನೀಡಿದರು.



ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯವನ್ನಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಜನಪರ ಆಡಳಿತ ನೀಡುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬಹುಮತ ಪಡೆಯಲಿದೆ. ಇದನ್ನು ಸಹಿಸದ ವಿರೋಧ ಪಕ್ಷದವರು ಸರ್ಕಾರದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಈ ಬಾರಿ ಚುನಾವಣೆಯಲ್ಲಿ ಮತದಾರ ತಕ್ಕ ಉತ್ತರ ನೀಡಲಿದ್ದಾನೆ ಎಂದರು.


ಪಕ್ಷಕ್ಕೆ ಕಾರ್ಯಕರ್ತರೇ ಬಲ, ಕಾರ್ಯಕರ್ತರ ಶ್ರಮದಿಂಧ ಅಧಿಕಾರ ಹಿಡಿದು ಆಡಳಿತ ನಡೆಸುತ್ತಿರುವ ಭಾರತ ಅಭಿವೃದ್ದಿಯಲ್ಲಿ ವಿಶ್ವದಲ್ಲಿಯೇ ಅಗ್ರಗಣ್ಯವಾಗುತ್ತಿದ್ದು, ಕಾರ್ಯಕರ್ತರು ಸರ್ಕಾರ ನೀಡಿರುವ ಯೋಜನೆಗಳನ್ನು ಮನೆ ಮನೆಗೂ ತೆರಳಿ ತಿಳಿಸುವ ಕಾರ್ಯವಾಗಬೇಕಾಗಿದೆ ಎಂದ ಅವರು ಈ ಬಾರಿ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂಧ ಸ್ಥಳೀಯರಿಗೆ ಟಿಕೆಟ್ ನೀಡುವ ಉದ್ದೇಶವಿದ್ದು, ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರುವ ವಿಶ್ವಾಸವಿದೆ ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಇಷ್ಟು ದಿನ ಆಡಳಿತ ನಡೆಸಿರುವ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಸಾಧನೆ ಶೂನ್ಯ ಎಂದ ಅವರು, ಒಂದು ತಿಂಗಳಲ್ಲಿ ಮಧುಗಿರಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಲಿದ್ದು, ಸ್ಥಳಿಯರಿಗೆ ಟಿಕೆಟ್ ಸಿಗುವ ಅವಕಾಶವಿದೆ ಎಂದರು. 


ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ರಾಜ್ಯ ಉಪಾಧ್ಯಕ್ಷ ಎಂ.ಬಿ,ನಂದೀಶ್, ಜಿಲ್ಲಾ ಉಪಾಧ್ಯಕ್ಷ ಬಿ.ಎನ್.ಲಕ್ಷ್ಮೀಪತಿ, ಪ್ರಧಾನ ಕಾರ್ಯದರ್ಶಿ ಪಾವಗಡ ರವಿ, ರೈತ ಮೋರ್ಚಾ ಉಪಾದ್ಯಕ್ಷ ನಾಗರಾಜಪ್ಪ, ಯುವ ಮೋರ್ಚಾ ಅಧ್ಯಕ್ಷ ಮಾಲಿ ಭರತ್, ಅಭಿಯಾನದ ಜಿಲ್ಲಾ ಸಂಚಾಲಕ ಮಾರುತಿ ಗಂಗಹನುಮಯ್ಯ, ಮಂಡಲ ಅಧ್ಯಕ್ಷರಾದ ನರಸಿಂಹಮೂರ್ತಿ, ರವಿಶಂಕರ್ ನಾಯ್ಕ್, ಕಾರ್ಯದರ್ಶಿಗಳಾದ ನಾಗೇಂದ್ರ, ಸೀತಾರಾಮು, ಯುವ ಮೋರ್ಚಾ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಮ್ಮ, ಪದಾಧಿಕಾರಿಗಳಾದ ಕಲ್ಪನ ಗೋವಿಂದರಾಜು, ಲತಾ ಪ್ರದೀಪ್, ರವಿ, ಪ್ರಕಾಶ್, ಅಶ್ವತ್ಥ್ ನಾರಾಯಣ್, ಉಪ್ಪಾರಹಳ್ಳಿ ಶಿವಕುಮಾರ್, ಶ್ರೀನಿವಾಸ್ ಹಳೇಹಟ್ಟಿ, ಪ್ರಕಾಶ್ ಹಾಗೂ ಮುಂತಾದವರು ಇದ್ದರು. 


ವರದಿ : ಮದುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು