ಚಿಕ್ಕನಾಯಕನಹಳ್ಳಿ: ರೈತರಿಗೆ ವಿರತಣೆ ಮಾಡಲು ನರ್ಸರಿಯಲ್ಲಿ ಬೆಳೆಸಿರುವ ಸಸಿಗಳ ಬೆಲೆ ಹೆಚ್ಚಿಸಿರುವ ಕ್ರಮವನ್ನು ಸಾಮಾಜಿಕ ಅರಣ್ಯ ಇಲಾಖೆ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ಅರಣ್ಯ ಸಸಿಗಳನ್ನು ಬೆಳೆಸುವ ಯೋಜನೆಯಡಿ ಏಕಾಏಕಿ ದರ ಪರಿಷ್ಕರಣೆ ಮಾಡಿರುವುದು ಸರಿಯಲ್ಲ. ಹೀಗಾಗಿ ಯೋಜನೆ ಸಂಪೂರ್ಣ ವಿಫಲವಾಗುವ ಸಾಧ್ಯತೆ ಇದೆ. ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಇಲ್ಲಿನ ಸಾಮಾಜಿಕ ಅರಣ್ಯ ಉಪ ವಿಭಾಗದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಂಘದ ಕಾರ್ಯಕರ್ತರು ಗುರುವಾರ ಮನವಿ ಪತ್ರ ಸಲ್ಲಿಸಿದರು.
ಯೋಜನೆಯು ಅರಣ್ಯ ಕೃಷಿಗೆ ಪ್ರೋತ್ಸಾಹದಾಯಕವಾಗಿರಬೇಕಾಗಿತ್ತು. ದರ ಪರಿಷ್ಕರಣೆಯಿಂದ ಫಲಾನುಭವಿಗಳು ಅರಣ್ಯ ಕೃಷಿ ಕೈಗೊಳ್ಳಲು ಹಿಂದೇಟುಹಾಕುವಂತಾಗಿದೆ. ಇದರಿಂದ ಯೋಜನೆಯ ಮೂಲ ಉದ್ದೇಶ ಸಫಲವಾಗುವುದಿಲ್ಲ.
ಈಗಾಗಲೇ ವಲಯ ವಾರು ಲಕ್ಷಾಂತರ ಗಿಡಗಳನ್ನು ಬೆಳೆಸಿದ್ದು, ರೈತ ಫಲಾನುಭವಿಗಳು ಖರೀದಿಸದೇ ಹೋದಲ್ಲಿ ಇಲಾಖೆಗೆ ಕೋಟ್ಯಂತರ ರೂ. ನಷ್ಟವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಲಾಭ, ನಷ್ಟದ ವಿಷಯವನ್ನು ಪ್ರಮುಖವಾಗಿ ಪರಿಗಣಿಸದೆ ರೈತ ಫಲಾನುಭವಿಗಳಿಗೆ ವಿತರಿಸುವ ಸಸಿಗಳಿಗೆ ಕನಿಷ್ಠ ಧರ ನಿಗದಿಪಡಿಸಬೇಕು. ಈ ವಿಷಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸಬೇಕು.
ಒಂದು ವೇಳೆ ಸೂಕ್ತ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ಮುಂದೆ ಇಲಾಖೆ ಕ್ರಮದ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಪ್ರಧಾನ ಸಂಚಾಲಕ ರಾಮನಹಳ್ಳಿಯ ಎ.ಎಂ. ಕುಮಾರಯ್ಯ, ಶೆಟ್ಟಿಕೆರೆಯ ಎಸ್.ಜೆ. ತೋಂಟಾರಾಧ್ಯ, ಭಾಗವಹಿಸಿದ್ದರು.
ವರದಿ: ಚಿಕ್ಕನಾಯಕನಹಳ್ಳಿ ಚಂದ್ರು.
