ಗುಬ್ಬಿ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತೋರೆಹಳ್ಳಿ ಗ್ರಾಮದ ರೈತ ಕುಟುಂಬದ ರಾಜಣ್ಣ ಭಾಗ್ಯಮ್ಮ ದಂಪತಿಯ ಪುತ್ರನಾದ ಕ್ಯಾಪ್ಟನ್ ರಾಕೇಶ್ ಟಿ.ಆರ್ ಅವರಿಗೆ ಈ ಬಾರಿಯ ಶೌರ್ಯ ಚಕ್ರ ಪ್ರಶಸ್ತಿ ದೊರಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಮ್ಮುವಿಗೆ ರಾಲಿಗೆ ಭೇಟಿ ನೀಡುವ ಸಮಯದಲ್ಲಿ ಆತ್ಮಾಹುತಿ ದಾಳಿ ಮಾಡಲು ಉದ್ದೇಶಿಸಿದ್ದ ಉಗ್ರರ ದಮನ ಮಾಡಿದ ಸಾಹಸಕ್ಕಾಗಿ ಇವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ. ರಾಲಿಗೆ ಮುನ್ನ ದಿನವೇ ಕ್ಯಾಪ್ಟನ್ ರಾಕೇಶ್ ನೇತೃತ್ವದ ಪ್ಯಾರಾ ವಿಶೇಷ ಪಡೆಯು ಕಾರ್ಯಾಚರಣೆ ನಡೆಸಿ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಕ್ಯಾಪ್ಟನ್ ರಾಕೇಶ್ ಅವರು ಬೆಂಗಳೂರಿನಲ್ಲಿ ಪದವಿ ಪಡೆದಿದ್ದಾರೆ. ಇವರು 2016ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಇವರು ಪ್ಯಾರಾಚ್ಯೂಟ್ ರೆಜಿಮೆಂಟ್‌ನ 9ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈ ವಿಶೇಷ ಪಡೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಸಾಹಸ ಮೆರೆದು ಉಗ್ರ ದಾಳಿಯನ್ನು ಹತ್ತಿಕ್ಕಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು 2022ರ ಏಪ್ರಿಲ್ 24ರಂದು ಸಾರ್ವಜನಿಕ ರಾಲಿಗಾಗಿ ಜಮ್ಮುವಿಗೆ ಬರುವವರಿದ್ದರು. ಆ ಸಮಯದಲ್ಲಿ ಸಾಕಷ್ಟು ಭದ್ರತೆ ಕೈಗೊಳ್ಳಲಾಗಿತ್ತು. ರಾಲಿ ಸಮಯದಲ್ಲಿ ಆತ್ಮಾಹುತಿ ಉಗ್ರರ ದಾಳಿಯಾಗುವುದೆಂಬ ಸುಳಿವು ದೊರಕಿತ್ತು.
ಈ ಪ್ರದೇಶದಲ್ಲಿ ಯಾವುದೇ ಉಗ್ರ ಚಟುವಟಿಕೆ ನಡೆದರೂ ಪ್ರತಿದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕುವ ಹೊಣೆ ರಾಕೇಶ್ ಟಿಆರ್ ನೇತೃತ್ವದ ವಿಶೇಷ ಪಡೆಯ ಮೇಲಿತ್ತು. ಜಮ್ಮು ಜಿಲ್ಲೆಯಲ್ಲಿ ಉಗ್ರರಿದ್ದಾರೆ ಎಂಬ ಮಾಹಿತಿ ದೊರಕಿದ ತಕ್ಷಣ ಇವರು ಅಲಾರ್ಟ್ ಆಗಿದ್ದರು.
ಪ್ರಾಣದ ಹಂಗು ತೊರೆದು ಕಾರ್ಯಾಚರಣೆ ಕೈಗೊಂಡ ರಾಕೇಶ್ ಟಿ.ಆರ್ ಅವರಿಗೆ ಉಗ್ರರಿರುವ ಸ್ಥಳದ ಮಾಹಿತಿ ದೊರಕಿತು. ಕ್ವಾಡ್ ಕಾಪ್ಟರ್ ಬಳಸಿ ಆ ಸ್ಥಳಕ್ಕೆ ಇವರು ತೆರಳಿದ್ದರು. ಉಗ್ರರಿದ್ದ ಸ್ಥಳವು ಜನನಿಬಿಡವಾಗಿದ್ದು, ಕಾರ್ಯಾಚರಣೆ ಕೈಗೊಳ್ಳುವುದು ನಿಜಕ್ಕೂ ಸಾಹಸದ ಕೆಲಸವಾಗಿತ್ತು. ತುಸು ಹೆಚ್ಚು ಕಡಿಮೆಯಾದರೂ ನಾಗರಿಕರ ಪ್ರಾಣಕ್ಕೆ ಅಪಾಯವಿತ್ತು.
ಈ ಸಂದರ್ಭದಲ್ಲಿ ಉಗ್ರರಿದ್ದ ಸ್ಥಳಕ್ಕೆ ಇವರು ದಾಳಿ ನಡೆಸಿದ್ದರು. ಉಗ್ರರು ಶರಣಾಗತರಾಗಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ, ಸಡನ್ ಆಗಿ ಆ ಉಗ್ರರು ಗುಂಡಿನ ಮಳೆ ಸುರಿಗೈದರು. ನಾಗರಿಕರ ಪ್ರಾಣ ಉಳಿಸುವ ಸಲುವಾಗಿ ರಾಕೇಶ್ ಪ್ರಾಣದ ಹಂಗು ತೊರೆದು ಒಬ್ಬ ಉಗ್ರನನ್ನು ಹೊಡೆದು ಉರುಳಿಸಿದರು. ಒಟ್ಟು ಇಬ್ಬರು ಉಗ್ರರನ್ನು ಸಾಯಿಸಿ ಸಂಭಾವ್ಯ ಅಪಾಯ ತಪ್ಪಿಸಿದರು. ಇವರ ಈ ಸಾಹಸಕ್ಕಾಗಿ ಶೌರ್ಯ ಚಕ್ರ ನೀಡಲಾಗಿದೆ.
ಮೂಲತಃ ತುಮಕೂರಿನವರಾದ ರಾಕೇಶ್ ಟಿ.ಆರ್. ಬೆಂಗಳೂರಿನಲ್ಲಿ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.

