ಅರಮನೆಯೊಳಗೆ ಇದ್ದ ಸಾಹಿತ್ಯ ವೇದಿಕೆಯನ್ನ ಜನಮನೆಯೊಳಗೆ ತರುವ ಪ್ರಯತ್ನವೇ ಕನ್ನಡ ಸಾಹಿತ್ಯ ಪರಿಷತ್.

 ಚಿಕ್ಕನಾಯಕನಹಳ್ಳಿ :ಅರಮನೆಯೊಳಗೆ ಇದ್ದ ಸಾಹಿತ್ಯ ವೇದಿಕೆಯನ್ನ ಜನಮನೆಯೊಳಗೆ ತರುವ ಪ್ರಯತ್ನವೇ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಹಿಂದಿದ್ದ ಉದ್ದೇಶ,


ಮೈಸೂರು ನಾಲ್ವಡಿ ಭೂಪಾಲರ ಆಶಯದಂತೆ ವಿಸ್ತರಿಸಿ ರಾಜ್ಯಾಧ್ಯoತ ಜಿಲ್ಲಾ, ತಾಲೂಕು ಮಟ್ಟದ ಸಮ್ಮೇಳನಗಳು ನಡೆಯುತ್ತಿವೆ

ಸಾಹಿತ್ಯ, ಕಲೆ, ಕ್ರೀಡೆ ಗಳಿಗೆ ಗಡಿ ಗೆರೆಗಳಿಲ್ಲ ಎಂದು ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


ಚಿಕ್ಕನಾಯಕನಹಳ್ಳಿ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಂಘದ ವೇದಿಕೆಯ ಸಾ, ಶಿ. ಮ ಹೆಸರಿನಲ್ಲಿ ಸಿದ್ದಪಡಿಸಿದ್ದ ಸಿರಿಧಾನ್ಯದ ರಾಶಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿದ ಅವರು, ಜೀವನ ಮೌಲ್ಯಗಳು ಮತ್ತು ಪ್ರೀತಿಯನ್ನು ಭಿತ್ತುವ ಕಾರ್ಯ ಸಾಹಿತ್ಯದ ಮೂಲಕವೂ ಆಗಬೇಕು, ಮನಸ್ಸು ಹೊಡೆಯುವುದು ಬಿಟ್ಟು ಒಳಗೊಳ್ಳುವ ಕಡೆ ಸಾಹಿತ್ಯ ರಚನೆ ಆಗಬೇಕು ಎಂದರು. 



ಇಂದು ತಿಮ್ಮನಹಳ್ಳಿ ವೇಣುಗೋಪಾಲ್ ರವರ ಆಶಯದಂತೆ ನೆಲಮೂಲ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ವಿಚಾರಗೋಷ್ಠಿಗಳು ನಡೆಯುತ್ತಿವೆ. ಸಮ್ಮೇಳನದ ಸಂಘಟಕರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಪ್ರತಿಕೂಲ ಸನ್ನಿವೇಶ ಸಹಜವಾಗಿರುವುದು ಒಂದಾದರೆ ಉದ್ದೇಶ ಪೂರ್ವಕವಾಗಿ ಜನಗಳ ನಡುವೆ ಏರ್ಪಡುವ ಪ್ರತಿಕೂಲವನ್ನು ನಿಭಾಯಿಸುವುದು ಕಷ್ಠ, ಕ್ರೀಡೆ, ಸಾಹಿತ್ಯ,ಕಲೆ, ಮಾನವತೆಯನ್ನು ನೆಲೆಗೊಳಿಸುವ ಪ್ರಾಣದ್ರವ್ಯಗಳಾಗಿವೆ. ಯಾವುದೇ ಪಕ್ಷ, ಯಾವುದೇ ರಾಜಕೀಯ ಸಿದ್ದಾಂತ ಒಪ್ಪಿಕೊಂಡರು, ಜನಪ್ರತಿನಿಧಿಗಳು ಪರಿಷತ್ ಗೆ ಗೌರವ ನೀಡಬೇಕು, ದೇಶವನ್ನು ವ್ಯಾಪಿಸಿಕೊಂಡಂತೆ, ಈ ಧೋರಣೆ ನಡೆಯಬೇಕು, ಸಾಹಿತ್ಯ ಪರಿಷತ್ ಸಮಾವೇಶಗಳಿಗಷ್ಟೇ ಸೀಮಿತಾಗದೆ, ಕನ್ನಡ ನಾಡು, ನುಡಿ, ಜನರನ್ನು ಒಳಗೊಂಡಂತೆ ಕೆಲಸ ಮಾಡುತ್ತಿದೆ ಎಂದರು.


10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಸಂಶೋಧಕ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ರವರು, ತಮ್ಮ ಭಾಷಣದಲ್ಲಿ. ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ, ಖಾಸಗಿ ಶಾಲೆಗಳಿಗೆ ವಿಲೀನಗೊಳಿಸಬೇಡಿ, ಬಡಮಕ್ಕಳ ಭವಿಷ್ಯಕ್ಕೆ ತೊಂದರೆಕೊಡಬೇಡಿ, ಸರ್ಕಾರಿ ಶಾಲೆ ಉಳಿಸಿ, ಈ ನಿಟ್ಟಿನಲ್ಲಿ ಬರಹಗಾರರು, ಸಮಾಜಮುಖಿ ಚಿಂತಕರು, ಕಲಾವಿದರು ತಮ್ಮ ಬರವಣಿಗೆಯ ಮತ್ತು ಚಿಂತನೆಯ ಮೂಲಕ ಜನಾಭಿಪ್ರಾಯ ರೂಪಿಸಿ ಸರ್ಕಾರವನ್ನು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

  ಕಳೆದ ದಶಕಗಳ ವರ್ಷಗಳಿಂದೀಚಿಗೆ ಶೇಕಡವಾರು ಹತ್ತರಷ್ಟು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ.


ಬಡ ಕುಟುಂಬದ ಮಕ್ಕಳು ಕಲಿಯುತ್ತಿರುವ ಗ್ರಾಮೀಣ ಭಾಗದ ಶಾಲೆಗಳ ನಾಡಿ ಹಿಡಿದು ರೋಗಪತ್ತೆ ಹಚ್ಚಿ ಗುಣಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಯೋಚಿಸಬೇಕಿದೆ ಎಂದರು.


ಸರ್ಕಾರಿ ಶಾಲೆಗಳನ್ನು ಸಂಖ್ಯಾ ಕೊರತೆಯ ನೆಪವನ್ನು ಮುಂದುಮಾಡಿ ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸಿ ಎಳ್ಳುನೀರು ಬಿಡಲಾಗುತ್ತಿದೆ.


ಸರ್ಕಾರದ ಇಂತಹ ಮನಸ್ಥಿತಿಯ ಹಿಂದೆ ಗುಪ್ತ ಕಾರ್ಯಸೂಚಿಯಿದೆ, ಸರ್ಕಾರಿ ಶಾಲೆಗಳ ಆಜುಬಾಜಿನಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವುದರ ಹಿಂದೆ ರಾಜಕಾರಣಿಗಳು ಮತ್ತು ಮಠಮಾನ್ಯಗಳು ಚುನಾವಣಾ ಋಣಸಂದಾಯ ಮಾಡುವ ವಾಗ್ದಾನವಿರಬಹುದು,


ಆದರೆ ಕನ್ನಡ ನುಡಿಗೆ ಕನ್ನಡ ಶಾಲೆಗಳಿಗೆ ಇಂತಹ ಕುತ್ತು ಎದುರಾಗಿರುವಾಗ ಬರಹಗಾರರು, ಸಮಾಜಮುಖಿ ಚಿಂತಕರು, ಕಲಾವಿದರು ತಮ್ಮ ಬರವಣಿಗೆಯ ಮತ್ತು ಚಿಂತನೆಯ ಮೂಲಕ ಜನಾಭಿಪ್ರಾಯ ರೂಪಿಸಿ ಸರ್ಕಾರವನ್ನು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ, ಇದು ಕನ್ನಡಪರ ಚರ್ಚೆ ಮತ್ತು ಚಿಂತನೆ ಎಂದರು

ಭಾಷೆಯೊಳಗೆ ಇರುವ ಮಾತೃತ್ವಕ್ಕೆ ಎದುರಾಗಿರುವ ಬೆದರಿಕೆಯನ್ನು ಹಿಮ್ಮೆಟ್ಟಿಸಲು ನಮ್ಮ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕನ್ನಡ ವಿವೇಕ ಸಮರ್ಥವಾಗಿದೆ.


ಎಂದರಲ್ಲದೆ, ಫ್ಯಾಸಿಸ್ಟ್ ಪ್ರೇತಾತ್ಮಗಳು ಮಂಚಿಕೆ ಮೇಲೆ ಕೂತು ನಮ್ಮ ಕನ್ನಡ ಸಾಂಸ್ಕೃತಿಕ ವಿವೇಕವನ್ನು ವಿಸ್ಮೃತಿಗೆ ನೂಕಲು ಹೊಂಚುಹಾಕಿವೆ. ಇದನ್ನು ವಿಫಲಗೊಳಿಸದಿದ್ದರೆ ನಮಗೆ ಉಳಿಗಾಲವಿಲ್ಲ, ಈ ಕೂಗುಮಾರಿಯನ್ನು ಹಿಮ್ಮೆಟಿಸದೆ ಅದಕ್ಕೆ ಕಿವಿಗೊಟ್ಟು ಅದರ ಕೈಯಾಳು ಬಾಯಾಳುವಾದರೆ ವಿನಾಶ ಖಂಡಿತ. ಹಾಗಾಗಿ ತೇಲಿ ಬಿಟ್ಟಿರುವ ಗಂಜಲದ ತಂತ್ರಕ್ಕೆ ಬಲಿಯಾಗದೆ ಕನ್ನಡ ಪ್ರೀತಿಯನ್ನು ಅದರ ಅಸ್ಮಿತೆಯನ್ನು ಕಾಪಿಡಲು ನಾವೆಲ್ಲರೂ ಕಂಕಣಬದ್ದರಾಗಬೇಕಿದೆ.


 ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಕನ್ನಡ ಶಾಲೆಗಳ ಮುಚ್ಚುವ ಶಾಲೆಗಳ ಪಟ್ಟಿ ಬೆಳೆಯುತ್ತಿದೆ. ಇಂತಹ ಬಿಕ್ಕಟ್ಟು ನಮ್ಮೆದುರಿಗಿರುವಾಗ ಕೋಟಿಕಂಠ ಗಾಯನದ, ಮನೆ ಮನೆಯ ಮೇಲೆ ಕನ್ನಡ ಧ್ವಜ ಹಾರಿಸಲು ನೀಡುವ ಕರೆಗಳು, ಹೊರಡಿಸುವ ಸುತ್ತೋಲೆಗಳು, ಸೋಲಾಡಿತನವಾಗಿದೆ, ಗಂಭೀರ ಚರ್ಚೆಗೆ ಒಳಗಾಗಬೇಕಿದ್ದ ವಿಷಯವು ವಿಸ್ಮೃತಿಗೆ ಒಳಗಾಗದಂತೆ ನಿರ್ಲಕ್ಷಿಸಿರುವ ದುರಂತವೊಂದನ್ನು ಕನ್ನಡ ಇತರ ತಾಲ್ಲೂಕುಗಳಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳ ಸಂಖ್ಯೆ ಏರುಗತಿಯಲ್ಲಿದೆ ಎಂಬ ಸಂಗತಿ ಆತಂಕಕಾರಿಯಾದುದು ಎಂದರು.


ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರತಿಕೂಲವನ್ನು ಅನುಕೂಲಕರವಾಗಿ ಮಾಡಿಕೊಳ್ಳುವ ಮೂಲಕ ಎಲ್ಲರನ್ನು ಒಳಗೊಂಡ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದರಲ್ಲದೆ, ವಿಶಿಷ್ಟ ರೀತಿಯಲ್ಲಿ ಸಮ್ಮೇಳನವನ್ನು ಚಾಲನೆ ನೀಡಿದೆ, ಸಮಾರೋಪದ ವರೆಗೂ ವಿಶಿಷ್ಟತೆಗಳೇ ನಡೆಯಲಿರುವುದು ರಾಜ್ಯದಲ್ಲಿಯೇ ಚಿಕ್ಕನಾಯಕನಹಳ್ಳಿ ಕಸಾಪ ತಂಡ ವಿಶೇಷ ಎಂದರು. 


ತಾ.ಕ.ಸಾ.ಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆಮನೆ ಮಾತನಾಡಿ, ಸಮ್ಮೇಳನದ ಗೋಷ್ಠಿಗಳಿಂದ ಹಿಡಿದು ಎಲ್ಲಾ ಭಾಗಗಳನ್ನು ರೈತರನ್ನೇ ಮೂಲವಾಗಿಟ್ಟುಕೊಂಡತೆ ನಡೆಸುತ್ತಿದ್ದು, ನಮ್ಮೆಲ್ಲರ ಒಡಲನ್ನು ತುಂಬಿಸುವ ಅನ್ನದಾತ ರೈತ ಮಹಿಳೆಯರಿಗೆ ಒಡಲನ್ನು ಜೋಡಿ ಮೊರಾದಲ್ಲಿ ಬಾಗಿನ ತುಂಬುವ ಮೂಲಕ ಉದ್ಘಾಟನೆಯನ್ನು ನೆರವೇರಿಸಲಾಗಿದೆ ಎಂದರು.


ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಕನ್ನಡ ಸಂಘದ ವೇದಿಕೆ ವರೆಗೆ ಸಿಂಗಾರ ಗೊಂಡ ಜೋಡೆತ್ತು ಗಾಡಿಯಲ್ಲಿ ರೈತ ನ ಸ್ನೇಹ ಕರ ವಸ್ತುಗಳು,ಜಾನಪದ ಮತ್ತು ಹುಲಿವೇಷ, ಸೂಮನಕುಣಿತ, ನಂದಿ ಧ್ವಜ,ಶಾಲಾ ಕಲಾ ತಂಡದೊಂದಿಗೆ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಡಾ.ಎಸ್.ಶಿವಣ್ಣ ಬೆಳವಾಡಿ, ಸಾಹಿತಿ ಡಾ.ಬಿ.ಸಿ.ಶೈಲನಾಗರಾಜ್, ಕವಿ ಶಬ್ಬೀರ್, ಎನ್.ನಾಗಪ್ಪ, ಸಾಹಿತಿ ಎಂ.ವಿ,.ನಾಗರಾಜ್ ರಾವ್, ಬಿ.ಇ.ಓ. ಹೆಚ್.ಕೆ.ಮನಮೋಹನ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜೆ.ದಿನೇಶ್, ಶೆಟ್ಟಿಕೆರೆ ಹೋಬಳಿ ಸಮ್ಮೇಳನದ ಅಧ್ಯಕ್ಷ ಸಾ.ಚಿ.ನಾಗೇಶ್, ನಿರೂಪ್ ರಾವತ್, ಡಾ. ಸಿ. ರವಿಕುಮಾರ್, ಗಂಗಾಧರ್ ಮಗ್ಗದಮನೆ, ಕಿರಣ್ ನಿಶಾನಿ, ಚಂದ್ರಶೇಖರ್ , ಲೋಕೇಶ್, ಆಟೋ ಮಂಜುನಾಥ್, ಸೇರಿದಂತೆ ಹಲವರು ಭಾಗಿಯಾಗಿದ್ದರು.


ನಗರ ಘಟಕದ ಅಧ್ಯಕ್ಷ ಗಂಗಾಧರ್ ಮಗ್ಗದಮನೆ ಸ್ವಾಗತಿಸಿದರು, ಹುಳಿಯಾರು ಷಬ್ಬೀರ್, ಮಂಜುನಾಥ್ ರಾಜ್ ಅರಸ್ ನಿರೂಪಿಸಿದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು