ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡಿದ್ದು ಚುನಾವಣೆ ಗಿಮಿಕ್‍ ಶಾಸಕ ಡಾ.ಜಿ.ಪರಮೇಶ್ವರ್.

 ಮಧುಗಿರಿ : ಚುನಾವಣೆ ಗಿಮಿಕ್‍ಗಾಗಿ ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡಿದ್ದು ಇದು ಕಾರ್ಯಗತವಾಗುವುದು ಅನುಮಾನ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.



ತಾಲೂಕಿನ ಗೊಂದಿಹಳ್ಳಿ ಗ್ರಾ.ಪಂ.ನ ರಘುವನಹಳ್ಳಿಯಲ್ಲಿ 14 ಲಕ್ಷದ ನೂತನ ಶಾಲಾ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ನಂತರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರ ಮೇಲ್ದಂಡೆ ಯೋಜನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಕೇಂದ್ರ ಬಿಜೆಪಿ ಸರ್ಕಾರ ಹುನ್ನಾರ ನಡೆಸಿದ್ದು, ಇದೇ 5300 ಕೋಟಿ ಹಣವನ್ನು ಕಳೆದ  ವರ್ಷವೇ ಕೊಡಬಹುದಿತ್ತು ಎಂದ ಅವರು ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ಚುನಾವಣಾ ಬಜೆಟ್ ಆಗಿದ್ದು, ಯಾವುದೇ ಯೋಜನೆಗಳಿಗೂ ಹಣ ಬಿಡುಗಡೆಯಾಗುವುದು ಅನುಮಾನವಾಗಿದೆ. ಮುಂಬರುವ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಎತ್ತಿನಹೊಳೆ ಯೋಜನೆ ಜಾರಿಗೊಳಿಸಿ 13 ಸಾವಿರ ಕೋಟಿ ನೀಡಿದ್ದು ಕೊರಟಗೆರೆಯ 109 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಕೇವಲ 500 ಕೋಟಿ ಹಣ ನೀಡಿದ್ದು, ಯೋಜನೆ ಕುಂಟುತ್ತಾ ಸಾಗಿದೆ. ಈ ಬಜೆಟ್‍ನಲ್ಲಿ ಎತ್ತಿನಹೊಳೆಗೆ ಕನಿಷ್ಟ 5000 ಸಾವಿರ ಕೋಟಿ ನೀಡಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇನೆ. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೆ ಗ್ರಹಣ ಹಿಡಿದಿದ್ದು, ರಾಜ್ಯ ಸರ್ಕಾರ ಈ ಯೋಜನೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆಪಾದಿಸಿದರು.

ಬಿಜೆಪಿಗೆ ದಲಿತರ ಮತ ಕೇಳಲು ಮುಖವಿಲ್ಲ

ಬಿಜೆಟ್ ಅನುದಾನದಲ್ಲಿ ಶೇ.24 ರಷ್ಟು ಪ.ಜಾತಿ/ಪ.ಪಂಗಡದ ಹಣ ಮೀಸಲಿಡಬೇಕಿದ್ದು, ಆದರಂತೆ 42 ಸಾವಿರ ಕೋಟಿ ಬರುತ್ತದೆ. ಆದರೆ ಇಲ್ಲಿಯವರೆಗೂ 20 ಸಾವಿರ ಕೋಟಿಯನ್ನೂ ಖರ್ಚು ಮಾಡದೆ ದಲಿತರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು ದಲಿತರ ಮತ ಕೇಳಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಬಿಜೆಪಿ ಸರ್ಕಾರ ಬಂದಾಗನಿಂದಲೂ ಎಸ್ಸಿ-ಎಸ್ಟಿ ಮಕ್ಕಳಿಗೆ ಶಿಷ್ಯವೇತನ ನೀಡಿಲ್ಲ. ದೇಶದ 14 ರಾಜ್ಯದಲ್ಲೂ ಕೇಂದ್ರದ ಶಿಷ್ಯವೇತನ ಬಿಡುಗಡೆ ಮಾಡಿಲ್ಲ. ಶಾಲಾ ಮಕ್ಕಳಿಗೆ ಬೈಸಿಕಲ್ ಇಲ್ಲ. ಸಮವಸ್ತ್ರ ನೀಡಿಲ್ಲ. ಮಕ್ಕಳ ಶಿಷ್ಯವೇತನ ಮಂಜೂರಾಗಿಲ್ಲ. ಗುತ್ತಿಗೆದಾರರ 25 ಸಾವಿರ ಕೋಟಿ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ನಿರ್ಲಕ್ಷಿಸಿದೆ ಎಂದರು.  

ಬಾಕ್ಸ್ :

ಕ್ಷೇತ್ರಕ್ಕೆ 2500 ಕೋಟಿ ಅನುದಾನ :

ತಾಲೂಕಿನ ಗೊಂದಿಹಳ್ಳಿಯಲ್ಲಿ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಪರಮೇಶ್ವರ್, ಕೊರಟಗೆರೆಗೆ ಇಲ್ಲಿಯವರೆಗೂ 2500 ಕೋಟಿ ಅನುದಾನ ತಂದಿದ್ದು, ಹೆಚ್ಚಿನ  ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮಾಡಿರುವ ಕೆಲಸದ ಪಟ್ಟಿಯ ಜೊತೆಗೆ ಮತದಾರರ ಬಳಿಗೆ ಹೋಗುತ್ತಿದ್ದು, ಮತ ಕೇಳಲು ಯಾವುದೇ ಮುಜುಗರವಿಲ್ಲ. ಹೆಚ್ಚಿನ ಅನುದಾನ ತರಲು ಬಿಜೆಪಿ ಪಕ್ಷ ತಾರತಮ್ಯ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುತ್ತೇನೆ. ಪಕ್ಷ ಹಾಗೂ ಕೊರಟಗೆರೆ ಜನತೆಯ ಆಶೀರ್ವಾದದಿಂದ ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದರು.  

ಈ ಸಂದರ್ಭದಲ್ಲಿ ಪೀಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಸಿ.ಭೈರಪ್ಪ, ಗ್ರಾ.ಪಂ ಸದಸ್ಯ ಸಂಕಾಪುರ ದಿಲೀಪ್, ಎಪಿಎಂಸಿ ಮಾಜಿ ಸದಸ್ಯೆ ರಮಾಬಾಯಿ, ಇಸಿಓ ಕಾಂತಮ್ಮ, ನಿವೃತ್ತ ಶಿಕ್ಷಕ ನಾಗರಾಜು, ರಘುವನಹಳ್ಳಿ ಸೋಮಣ್ಣ ಹಾಗೂ ಮುಂತಾದರವರು ಇದ್ದರು. 


ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು