ಚಿಕ್ಕನಾಯಕನಹಳ್ಳಿ : ಸರ್ಕಾರಿ ನೌಕರರರಿಂದ ಸರ್ಕಾರಕ್ಕೆ ಡೆಡ್ ಲೈನ್ ಹಳೆ ಪಿಂಚಣಿ ವ್ಯವಸ್ಥೆ ಹಾಗೂ 7ನೇ ವೇತನ ಆಯೋಗ ಜಾರಿಗಾಗಿ ಒತ್ತಾಯ ಮಾರ್ಚ್ 01 ರಂದು ರಾಜ್ಯದ ಎಲ್ಲಾ ವರ್ಗದ ನೌಕರರು ಕರ್ತವ್ಯಕ್ಕೆ ಚಕ್ಕರ್.
ಈ ಬಜೆಟ್ ನಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನ ತಿರಸ್ಕರಿಸಿರುವುದರಿಂದ ತಮ್ಮ ಬೇಡಿಕೆ ಈಡೇರಿಸುವವರೆಗೂ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ತಮ್ಮ ಕರ್ತವ್ಯಕ್ಕೆ ಗೈರು ಹಾಜರಿ ಮೂಲಕ ಸರ್ಕಾರವನ್ನು ಎಚ್ಚರಿಸಲು ನಿಂತಿದೆ.
ಚಿಕ್ಕನಾಯಕನಹಳ್ಳಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿ ಮಾರ್ಚ್ 1 ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ತಾಲ್ಲೂಕಿನ ಎಲ್ಲಾ ಸರ್ಕಾರಿ ನೌಕರರ ಸಂಘಗಳು ಬೆಂಬಲ ವ್ಯಕ್ತಪಡಿಸಿದ್ದು ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಠಾವಧಿ ಮುಷ್ಕರವನ್ನು ಬೆಂಬಲಿಸುವಂತೆ ಸರ್ಕಾರಿ ಅಧಿಕಾರಿ-ನೌಕರರಲ್ಲಿ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ ನ್ಯಾಯಸಮ್ಮತ ಹಕ್ಕಾಗಿದ್ದು ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೌಕರರು ಕುಟುಂಬ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸುವುದು ಸರ್ಕಾರದ ಜವಬ್ದಾರಿಯಾಗಿದ್ದರೂ ನಿರ್ಲಕ್ಷ್ಯ ವಹಿಸಿರುವುದಕ್ಕೆ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 1ರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದೆ ಎಂದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ.40% ಫಿಟ್ ಮೆಂಟ್ ಸೌಲಭ್ಯವನ್ನು 2022ರ ಜುಲೈ ತಿಂಗಳಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸುವುದು ಹಾಗೂ ರಾಜ್ಯದ ಎನ್.ಪಿ.ಎಸ್ ನೌಕರರ ಜೀವನ ನಿರ್ವಹಣೆ ಹಾಗೂ ನಿವೃತ್ತಿ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್ ನೌಕರರನ್ನು ಓ.ಪಿ.ಎಸ್ ವ್ಯಾಪ್ತಿಗೆ ತರುವುದು, ಸರ್ಕಾರದ ಜವಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತಿಸ್ ಘಡ, ಜಾರ್ಖಾಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಲ್ಲಕ್ಕಿ ಬಸವರಾಜು ಮಾತನಾಡಿ,
ರಾಜ್ಯದಲ್ಲಿನ ವಿಧಾನಸೌಧದ ಇಡಿದು ಗ್ರಾಮ ಪಂಚಾಯಿತಿ ನೌಕರರವರೆಗೂ,ಹಾಗೂ ಚಾಲಕರು ಸಹ , ಸಂಘ-ಸಂಸ್ಥೆಯ ಪದಾಧಿಕಾರಿಗಳು ಸರ್ಕಾರಿ ನೌಕರರ ಬೆಂಬಲಕ್ಕೆ ನಿಂತಿದ್ದು ಅನಿರ್ಧಿಷ್ಠಾವದಿ ಮುಷ್ಕರಕ್ಕೆ ಒಗ್ಗಟ್ಟಿನ ನಿಲುವು ತೋರಿದ್ದಾರೆ ಎಂದರಲ್ಲದೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಗವಿರಂಗಯ್ಯ ಮಾತನಾಡಿ ನಮ್ಮ ಬೇಡಿಕೆಯನ್ನು ಈಡೇರಿಸಲು ಕಂದಾಯ ಇಲಾಖೆ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ತಾಲೂಕು ಶಿಕ್ಷಕರ ಸಂಘ, ಚಾಲಕರ ಸಂಘ ಎಲ್ಲರು ಸಹ ಬೆಂಬಲಿಸುವ ಮೂಲಕ ತಮ್ಮ ಬೇಡಿಕೆಗೆ ಸಹಕರಿಸಲು ಮನವಿ ಮಾಡಿದರು.
ಈ ವೇಳೆ ಕ್ರೀಡಾ ಕಾರ್ಯದರ್ಶಿ ರಾಜಯ್ಯ, ಸಹ ಕಾರ್ಯದರ್ಶಿ ಆರ್.ರವಿಕುಮಾರ್,ರಾಜ್ಯ ಪರಿಷತ್ ಸದಸ್ಯ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶಿಕ್ಷಕರ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಕೆ ಶಿವಕುಮಾರ್ ಪರಮೇಶ್, ಬಿ.ಕೆ.ಯೋಗೀಶ್ ಮೂರ್ತಿ, ಗೋವಿಂದಯ್ಯ ಡಿ ಉಪಸ್ಥಿತರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು
