ಮಧುಗಿರಿ : ಮಧುಗಿರಿ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ವಿಚಾರದಲ್ಲಿ ನಾನು ಸದಾ ಮುಂದಿರುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಜಡೇಗೊಂಡನಹಳ್ಳಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ 12.5 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದಲ್ಲಿ ವ್ಯವಸಾಯವೇ ಪ್ರದಾನ ಕಸುಬು. ಆದರೆ ಇಲ್ಲಿ ಬೇರೆ ಯಾವುದೇ ಉದ್ಯೋಗವಿಲ್ಲ. ಅದಕ್ಕಾಗಿ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗಲು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ
ಕೊಡಿಸಬೇಕು. ಬಡತನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ರಾಜ್ಯದ ಬಡವರಿಗೆ ಸಾಧ್ಯವಿಲ್ಲವೆಂದು ಅರಿತ ಕುಮಾರಸ್ವಾಮಿ ಅ„ಕಾರಕ್ಕೆ ಬಂದರೆ ರಾಜ್ಯದ ಎಲ್ಲ ಮಕ್ಕಳಿಗೆ 1-12 ತರಗತಿಯವರೆಗೂ ಉಚಿತ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಕಳೆದ ವರ್ಷ ನಾನು ನೀಡಿದ ಮಾತಿನಂತೆ ಈ ಶಾಲೆಗೆ 12.5 ಲಕ್ಷ ಅನುದಾನ ನೀಡಿದ್ದು ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು. ಮಕ್ಕಳಿಂದ ಮತವಿಲ್ಲ ಆದರೆ ಮಕ್ಕಳೇ ನಮಗೆ ಭವಿಷ್ಯ ಎಂದರಿತ ಕುಮಾರಸ್ವಾಮಿ ಈ ಉಚಿತ ಶಿಕ್ಷಣದ ಭರವಸೆ ನೀಡಿದ್ದಾರೆ. ಹಿಂದೆ ಈ ಬಗ್ಗೆ ಯಾವುದೇ ನಾಯಕರು ಚಿಂತಿಸಿರಲಿಲ್ಲ ಇದನ್ನು ಪೋಷಕರು ಮನಗಾಣಬೇಕಿದ್ದು ಜೆಡಿಎಸ್ ಬೆಂಬಲಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಇಓ ತಿಮ್ಮರಾಜು, ಇಸಿಓ ಚೆನ್ನಬಸಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ರಂಗಮ್ಮ, ಸದಸ್ಯ ಚೌಡಪ್ಪ, ನರಸಿಂಹಮೂರ್ತಿ, ಮುಖಂಡರಾದ ತುಂಗೋಟಿ ರಾಮಣ್ಣ, ಗುಂಡಗಲ್ಲು ಶಿವಣ್ಣ, ಬಿಜವರ ಶ್ರೀನಿವಾಸ್, ಸತೀಶ್, ರಮೇಶ್, ನಟರಾಜ್, ಮುಖ್ಯ ಶಿಕ್ಷಕರು, ಶಿಕ್ಷಕರು ಶಾಲಾ ಮಕ್ಕಳು ಹಾಜರಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
