ಮಧುಗಿರಿ : ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಸಧೃಡರಾದರೆ ಕುಟುಂಬ ಸಧೃಡವಾದಂತೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಲಿಡ್ಕರ್ ವತಿಯಿಂದ 30 ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಸಾಧನೆಯನ್ನು ತೋರಿಸಿದ್ದಾರೆ. ಇಂದು ಗ್ರಾಮೀಣ ಭಾಗದ ಮಹಿಳೆಯರೂ ಸಹ ಆರ್ಥಿಕವಾಗಿ ಸ್ವವಲಂಭಿಯಾಗುತ್ತಿದ್ದಾರೆ. ಹೈನುಗಾರಿಕೆ, ಗುಡಿಗಾರಿಕೆ, ಇತರೆ ವ್ಯಾಪಾರಗಳ ಮೂಲಕ ಆರ್ಥಿಕ ಸದ್ಗುಣಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇಂದು ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿದ್ದು ಸಾರ್ಥಕ ಕೆಲಸವಾಗಿದೆ. ಇಷ್ಟು ಮಹಿಳೆಯರಂತೆ ಉಳಿದವರಿಗೂ ವಿವಿಧ ಕೌಶಲ್ಯಾಧಾರಿತ ಸ್ವ ಉದ್ಯೋಗ ಕೈಗೊಳ್ಳಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ನಿಮ್ಮ ಜೊತೆ ಸದಾ ಇರಲಿದ್ದು ಬೇಕಾಗುವ ಅನುಕೂಲ ಮಾಡಿಕೊಡಲಾಗುವುದು ಎಂದರು.
ಮುಖಂಡ ಹೆಚ್‍ಎಂಟಿ ನರಸೀಯಪ್ಪ ಮಾತನಾಡಿ, ನಾನು ಇಲ್ಲಿಯವರೆಗೂ ಜೆಡಿಎಸ್ ಕಾರ್ಯಕರ್ತ. ಆದರೆ ಪಕ್ಷದಲ್ಲಿ ಕೊಂಚ ಬೇಸರ ಬಂದ ಕಾರಣ ಹೊರಬಂದಿದ್ದೇನೆ. ಇಂತಹ ಹಲವಾರು ಕಾರ್ಯಕ್ರಮಗಳು ಮುಂದೆಯೂ ನಡೆಯಲಿ. ಶಾಸಕರು ಪ್ರಾಮಾಣಿಕರಿದ್ದು ಮೊದಲು ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಬೇಕು ಎಂದರು.
ಈ ಸಂದರ್ಭದಲ್ಲಿ : ಹೋಬಳಿ ಜೆಡಿಎಸ್ ಅಧ್ಯಕ್ಷ ಲಕ್ಷ್ಮೀನರಸಿಂಹರೆಡ್ಡಿ, ಮುಖಂಡರಾದ ನಾಸೀರ್, ಜಬೀ, ರಾಜಕುಮಾರ್, ರಾಜು, ರಮೇಶ್, ನರಸಿಂಹಮೂರ್ತಿ, ಮಾಜಿ ತಾ.ಪಂ. ಸದಸ್ಯ ನರಸರೆಡ್ಡಿ, ಗ್ರಾ.ಪಂ. ಸದಸ್ಯ ನರಸಿಂಹಯ್ಯ, ಲಿಡ್ಕರ್ ಸಂಸ್ಥೆಯ ಅಬಕಾರಿ ಗಂಗಾಧರ್, ಹಾಗೂ ಮಹಿಳಾ ಫಲಾನುಭವಿಗಳು ಇದ್ದರು.
ವರದಿ : ಮಧುಗಿರಿ ಬಾಲು ಪಣಿಂದ್ರ
