ಮಧುಗಿರಿ : ಜಗತ್ತಿನಲ್ಲಿ ಎಲ್ಲ ಕಷ್ಟಗಳಿಗೆ ಶಿಕ್ಷಣವೇ ಮದ್ದಾಗಿದ್ದು ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಸಬೇಡಿ ಎಂದು ಜಿ.ಪಂ.ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ತಿಳಿಸಿದರು.
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋದಿ ಮತ್ತು ಗ್ರಾಹಕರ ರಕ್ಷಣಾ ದಳ ಹಾಗೂ ಕತ್ತಲಿನಿಂದ ಬೆಳಕಿನೆಡೆಗೆ ವಿಧವೆಯರ ಒಕ್ಕೂಟ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಂಡನನ್ನು ಕಳೆದುಕೊಂಡವರ ಸ್ಥಿತಿ ತುಂಬ ಕಷ್ಟ. ಸಮಾಜದ ದೃಷ್ಟಿಯಲ್ಲಿ ಬೇಡವಾದವರಂತೆ ಬದುಕುವುದು ನರಕದಷ್ಟೆ ಸಮ. ಇಂತಹ ಸಮಯದಲ್ಲಿ ಇರುವ ಮಕ್ಕಳ ಲಾಲನೆ ಪಾಲನೆಯಿದ್ದರೆ ಅಂತವರ ಗೋಳು ಹೇಳ ತೀರದು. ಈಗ ಸರ್ಕಾರ ಪ್ರತಿ ವಿಧವೆಯರಿಗೆ 800 ರೂಪಾಯಿ ನೀಡುತ್ತಿದ್ದು ಅದು ಸಾಲದು. ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ ನಿಮಗೆ ಅನುಕೂಲವಾಗುವಂತಹ ಕಾರ್ಯಕ್ರಮ ನೀಡುತ್ತೇವೆ. ವಿಶೇಷವಾಗಿ ವಿಧವೆಯರ ಕಲ್ಯಾಣ ಮಂಡಳಿಯನ್ನು
ಆರಂಭಿಸಿ ಈ ವರ್ಗಕ್ಕೆ ಆಸರೆಯಾಗಬೇಕು. ಪ್ರತಿಯೊಬ್ಬರಿಗೂ 4 ಕುರಿಗಳನ್ನು ವಿತರಿಸಿದರೆ ಅವರ ಕಷ್ಟಕ್ಕೆ ನೆರವಾಗಲಿದೆ. ಹೆಣ್ಣು ಯಾವತ್ತಿಗೂ ಅಬಲೆಯಲ್ಲ. ಅವಳು ಸಬಲೆಯಾಗಿದ್ದಾಳೆ. ನಿಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಿಮಗೆ ಸಹಕಾರ ನೀಡುತ್ತೇವೆ. ಕ್ಷೇತ್ರದಲ್ಲಿ 15 ಸಾವಿರ ವಿಧವೆಯರು ಇರುವ ವಿಚಾರ ಕೇಳಿ ಮನಸ್ಸಿಗೆ ತುಂಬಾ ನೋವಾಗಿದ್ದು, ಮುಂದಿನ ದಿನಗಳಲ್ಲಿ ಮನೆ, ನಿವೇಶನ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುವ ವಿಚಾರದಲ್ಲಿ ನಿಮ್ಮ ಜೊತೆಗಿರುವುದಾಗಿ ತಿಳಿಸಿದರು.
ವಿಧವೆಯರ ಮಂಡಳಿ ರಚನೆಯಾಗಲಿ : ರಾಜ್ಯಾದ್ಯಂತ ವಿಧವೆಯರ ಮಂಡಳಿಯನ್ನು ರಚಿಸಿ ಎಲ್ಲ ಸೌಲಭ್ಯಗಳಲ್ಲೂ ಮೀಸಲಾತಿ ನೀಡುವುದರ ಜೊತೆಗೆ ವಿಶೇಷ ಯೋಜನೆಯಡಿ ಮನೆ, ನಿವೇಶನ, ಬಸ್, ರೈಲ್ವೆ ಪಾಸ್ ಕೊಡಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ ಖಂಡಿತಾ ಪಾಸ್ ವ್ಯವಸ್ಥೆ ಮಾಡಿಸುತ್ತೇವೆ. ಮುಂದೆ ಕೆ.ಎನ್.ರಾಜಣ್ಣ ಹಾಗೂ ಆರ್.ರಾಜೇಂದ್ರ ರವರೊಡನೆ ಸೇರಿ ಮಧುಗಿರಿಯನ್ನು ಗುಡಿಸಲು ಮುಕ್ತ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ : ತಹಶೀಲ್ದಾರ್ ಸಿಕ್ಬತ್ತುಲ್ಲಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ತಾ.ಪಂ. ಮಾಜಿ ಅಧ್ಯಕ್ಷೆ ಇಂದಿರಾ, ಮಾಜಿ ಸದಸ್ಯೆ ಸುವರ್ಣಮ್ಮ, ಮಾತನಾಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಸಂಪಂಗಿ ಶ್ರೀನಿವಾಸ್, ರಾಷ್ಟ್ರೀಯ ಮಹಿಳಾ ಅಯೋಗದ ಗೀತಾ, ಪದಾ„ಕಾರಿಗಳಾದ ಅಂಜನಮೂರ್ತಿ, ಜಮೀರ್, ರವಿಕುಮಾರ್ ರೆಡ್ಡಿ, ಮಧುಕುಮಾರ್, ಡೇವಿಡ್ ಮೇನೆಜಸ್, ರೊನಾಲ್ಡ್, ಮಹೇಶ್, ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಚಂದ್ರಮ್ಮ, ಹಾಗೂ ಇತರರು ಇದ್ದರು.
ವರದಿ : ಮಧುಗಿರಿ ಬಾಲು ಪಣಿಂದ್ರ.
