ಗುಬ್ಬಿ: ರೈತರ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ನಿಟ್ಟೂರಿನಿಂದ ಗುಬ್ಬಿ ತಾಲ್ಲೂಕು ಕಚೇರಿಯವರೆಗೆ ರೈತ ಸಂಘ ,ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘದ ಸಹಯೋಗದೊಂದಿಗೆ ಸೋಮವಾರ ಪಾದಯಾತ್ರೆಯನ್ನು ನೆಡಸಲಾಯಿತು.
ಪಾದಯಾತ್ರೆಯು ತಾಲ್ಲೂಕು ಕಚೇರಿ ಸಮೀಪ ತಲುಪಿದಾಗ ರೈತ ಸಂಘದ ಸದಸ್ಯ ಕೃಷ್ಣಜೆಟ್ಟಿ ಯವರು ಅರೆಬೆತ್ತಲೆಯಾಗಿ ಉರುಳು ಸೇವೆ ನಡೆಸಿ ಗಮನ ಸೆಳೆದರು.
ತಾಲ್ಲೂಕು ಕಚೇರಿಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ಬಿ.ಆರತಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎ ಗೋವಿಂದರಾಜು ಪ್ರೊ.ನಂಜುಂಡಸ್ವಾಮಿಯವರ ರೈತಪರ ಚಿಂತನೆಗಳು ನಮ್ಮ ಹೋರಾಟಕ್ಕೆ ಸ್ಪೂರ್ತಿಯಾಗಿವೆ. ಎಂದ ಅವರು ನ್ಯಾಯದ ಮಾರ್ಗದಲ್ಲಿ ಹೋರಾಟವನ್ನು ಮುಂದುವರೆಸೋಣ ಎಂದು ಕರೆ ನೀಡಿದರು.
ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ ಋಷಿ ಮತ್ತು ಕೃಷಿ ಸಂಸ್ಕೃತಿ ಭಾರತದ ಮೂಲ ಪರಂಪರೆಗಳಾಗಿವೆ. ಕೃಷಿಗೆ ಹಾಗೂ ರೈತರ ಬೆಂಬಲಕ್ಕೆ ಸರ್ಕಾರವು ನಿಲ್ಲದಿದ್ದಲ್ಲಿ ದೇಶದ ಪರಿಸ್ಥಿತಿಯೇ ಅಭಿವೃದ್ಧಿ ಹೀನ ವಾಗುವುದು ಎಂದು ಎಚ್ಚರಿಸಿದರು.
ರೈತಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು. ವಿದೇಶದಿಂದ ಆಮದಾಗುತ್ತಿರುವ ಅಡಿಕೆಯನ್ನು ತಕ್ಷಣ ನಿಲ್ಲಿಸಿ , ರೈತರ ಬೆಂಬಲಕ್ಕೆ ಸರ್ಕಾರವು ನಿಲ್ಲಬೇಕಿದೆ ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯಿಂದಲೂ ವಿಫಲವಾಗಿದ್ದು, ರೈತರ ಶೋಷಣೆ ಹೆಚ್ಚಾಗುತ್ತಿದೆ .ಹಣ ನೀಡದೆ ರೈತರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಕಿಡಿ ಕಾರಿದ ಅವರು ಬಗರ್ ಹುಕ್ಕುಂ ಸಭೆಯನ್ನು ತಕ್ಷಣ ಕರೆದು ಹಲವಾರು ವರ್ಷಗಳಿಂದ ಅನುಭವದಲ್ಲಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್ ಕಾರ್ಯಧ್ಯಕ್ಷ ಗುರುಚನ್ನಬಸವಯ್ಯ, ಪದಾಧಿಕಾರಿಗಳಾದ ಗಂಗರೇವಣ್ಣ,ನಟರಾಜು, ಬಸವರಾಜು,ಯುವಘಟಕದ ಶಿವಕುಮಾರ್,ಪ್ರಾಂತ ರೈತ ಸಂಘದ ಅಜ್ಜಪ್ಪ, ದಲಿತ ಸಂಘರ್ಷ ಸಮಿತಿಯ ನಾಗರಾಜು, ಕೃಷ್ಣಪ್ಪ, ಕರವೇ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಅಪಾರ ರೈತರು, ಪ್ರಗತಿಪರ ಚಿಂತಕರು,ಮಾಜಿ ಸೈನಿಕರು ಪಾಲ್ಗೊಂಡಿದ್ದರು.
