ಗುಬ್ಬಿ : ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎರಡು ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೆಲಸವನ್ನು ಮಾಡುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಮಹಿಳಾ ವಿಕಾಸ ಕಾರ್ಯಕ್ರಮ, ತಾಲೂಕು ಮಟ್ಟದ ವಿಚಾರ ಮಹಿಳಾ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ಒಂದು ಯಶಸ್ವಿ ಗಂಡಸಿನ ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ ಎಂಬುದು ಸುಳ್ಳಲ್ಲ ನಾಲ್ಕು ಗೋಡೆಯ ಮಧ್ಯದಲ್ಲಿ ಬಂದಿಯಾಗಿದ್ದ ಹೆಣ್ಣು ಮಗಳು ಇಂದು ಪುರುಷರಷ್ಟೇ ಸಮಾನತೆಯಾಗಿ ಬದುಕು ಮಾಡುತ್ತಿರುವುದಕ್ಕೆ ಕಾರಣವೇ ಶಿಕ್ಷಣ, ನಾಗರೀಕರಣ ನಮ್ಮ ಸಂವಿಧಾನದ ಆಶಯಗಳುಎಂದು ತಿಳಿಸಿದರು.
ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ ಜ್ಞಾನವಿಕಾಸದಂತಹ ಹಲವು ಯೋಜನೆಗಳನ್ನು ನಮ್ಮ ಸಂಸ್ಥೆಯು ನೀಡಿ ಸ್ವ ಸಹಾಯ ಸಂಘ, ಮಾರುಕಟ್ಟೆ, ಹಲವು ಚಟುವಟಿಕೆಗಳನ್ನು ಕೇಂದ್ರವಾಗಿರಿಸಿಕೊಂಡು ಇಡೀ ರಾಜ್ಯದಲ್ಲಿ ನಮ್ಮ ಸಂಸ್ಥೆಯು ಕೆಲಸ ಮಾಡುತ್ತಿದೆ ಗುಬ್ಬಿ ತಾಲೂಕಿನಲ್ಲಿ ಸುಮಾರು 23 ಸಾವಿರ ಸದಸ್ಯರು ನಮ್ಮ ಸಂಸ್ಥೆಯ ಅನುಕೂಲ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ ಮಹಿಳೆಯರ ಸಬಲೀಕರಣವಾದಾಗ ಮಾತ್ರ ಕುಟುಂಬ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಪೂರ್ವದ ಕಾಲದಲ್ಲಿ ಮಹಿಳೆಯರು ಹೊರಬಂದು ದುಡಿಯುವುದು ಬಹಳ ಕಷ್ಟವಾಗಿತ್ತು ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದೇ ಅಲ್ಲದೆ ಸ್ವಂತ ಉದ್ಯೋಗವನ್ನು ಅವಲಂಬಿಸಿ ದೊಡ್ಡ ಮಟ್ಟದ ಉದ್ಯಮಿಗಳು ಸಹ ಆಗಿದ್ದಾರೆ ಅದಕ್ಕೆ ಕಾರಣವೇ ಮಹಿಳಾ ಸಂಘಗಳು ಪ್ರತಿಯೊಬ್ಬ ಮಹಿಳೆಯು ಅವಳಿಗೆ ಶಕ್ತಿ ಧೈರ್ಯ ಬರಬೇಕು ಎಂದರೆ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿ ರೂಪ ವಿಶ್ವನಾಥ್, ವಕೀಲೆ ಪುಷ್ಪಲತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ರಾಜೇಶ್, ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಶಿವಮ್ಮ, ಸಂಸ್ಥೆಯ ಸಮನ್ವಯಾಧಿಕಾರಿ ದೀಪ ಸೇರಿದಂತೆ ಇನ್ನಿತರರು ಹಾಜರಿದ್ದರು.
