ತುಮಕೂರು :ಪ್ರತಿಯೊಬ್ಬರಿಗೂ ಸಹ ಉನ್ನತ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಡಾ. ಲೋಕೇಶ್ ತಿಳಿಸಿದರು.
ನಗರದ ವಿದ್ಯಾ ಎಜುಕೇಶನ್ ಸೊಸೈಟಿಯ ವಿದ್ಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲಿಕಾರ್ಥಿ ವಿದ್ಯಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ಎಸ್ಎಸ್ಎಲ್ ಸಿ, ಪಿ ಯುಸಿ ಓದುವಂತಹ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ಮುಂದಾಗುತ್ತಿಲ್ಲ ಅದಕ್ಕೆ ನೂರಾರು ಸಮಸ್ಯೆಗಳು ಇದ್ದೆ ಇರುತ್ತವೆ ಅವೆಲ್ಲವುಗಳನ್ನು ಬದಿಗೊತ್ತಿ ಉನ್ನತ ಶಿಕ್ಷಣ ಪಡೆದಾಗ ಸರಕಾರಿ ಕೆಲಸ ಸೇರಿದಂತೆ ಅವರ ದುಡಿಮೆಗೆ ಕೂಡ ಅನುಕೂಲವಾಗುತ್ತದೆ. ಮತ್ತು ಎಲ್ಲಾ ರೀತಿಯ ವಿಷಯಗಳಿಗೂ ಸಹ ಅಭ್ಯಾಸ ಮಾಡಲು ಉತ್ತಮ ಗುಣಮಟ್ಟದ ಪುಸ್ತಕಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾದ ಸಂಪನ್ಮೂಲಗಳನ್ನು ಇಲ್ಲಿಂದಲೇ ನೀಡಲಾಗುತ್ತಿದೆ, ಇನ್ನು ಕೆಎಎಸ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಇಲ್ಲಿನ ಪುಸ್ತಕಗಳು ಉತ್ತಮವಾಗಿವೆ ವಿದ್ಯಾ ಪದವಿ ಕಾಲೇಜಿನಲ್ಲಿ ಈಗ ಆರಂಭಿಸಿದ್ದು ಇದರ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಸಿ ಕೃಷ್ಣಪ್ಪ ಮಾತನಾಡಿ ನಮ್ಮ ಕಾಲೇಜಿನಲ್ಲಿ ನೂತನವಾಗಿ ಆರಂಭವಾಗಿರುವ ಈ ಕೋರ್ಸನ್ನು ಬಳಕೆ ಮಾಡಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡುವುದಕ್ಕೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ ಹಾಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಕಲಿಯುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕು. ಎಂದು ಮನವಿ ಮಾಡಿದರು.
ವಿದ್ಯಾ ಎಜುಕೇಶನ್ ಸೊಸೈಟಿ ಯ ಕಾರ್ಯದರ್ಶಿ ಅರ್ಜುನ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಉನ್ನತ ವಿದ್ಯಾಭ್ಯಾಸ ಶಿಕ್ಷಣವನ್ನು ಪಡೆದಾಗ ದೇಶಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಹಾಗಾಗಿ ತಾವು ಕೆಲಸವನ್ನು ಮಾಡಿಕೊಂಡು ತಮ್ಮ ಬಿಡುವಿನ ವೇಳೆಯಲ್ಲಿ ಹಾಗೂ ಆಸಕ್ತಿಯಿಂದ ಕಲಿಯಲು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ತಮಗೆ ಇಷ್ಟ ಬಂದ ಕೋರ್ಸ್ ಗಳನ್ನು ಪಡೆದುಕೊಂಡು ವಿದ್ಯಾಭ್ಯಾಸ ಮಾಡಿದರೆ ಮುಂದಿನ ನಿಮ್ಮ ಉದ್ಯೋಗಕ್ಕೂ ಸರಕಾರಿ ಉದ್ಯೋಗ ಪಡೆಯಲು ಸಹ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ರಾಜೇಶ್ ಎಸ್ ಶಾಲೆಯ ಮುಖ್ಯ ಶಿಕ್ಷಕ ಅಬ್ಬಾಸಾಬ್,ಸಂಸ್ಥೆಯ ಮಾರ್ಗ ದರ್ಶಕ ಪ್ರಕಾಶ್, ಸೇರಿದಂತೆ ಆಡಳಿತ ವರ್ಗ ಕಾಲೇಜಿನ ಉಪನ್ಯಾಸಕರು ಶಾಲೆಯ ಶಿಕ್ಷಕರು ಇನ್ನಿತರರು ವಿದ್ಯಾರ್ಥಿಗಳು ಹಾಜರಿದ್ದರು.
